May 2, 2025

ಆಗರ ಕೆರೆಯಲ್ಲೊಂದು ದಿನ…

ಮಂಜಾವರಿಸಿದ ಕೆರೆಯಲ್ಲಿ ಗುಳುಮುಳುಕ
ಡಾ. ಅಶೋಕ್. ಕೆ. ಆರ್.  
ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್‌ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ ಆಗರ ಕೆರೆಗೆ ಬಹಳ ವರುಷಗಳ ಹಿಂದೆ ಒಂದು ಬಾರಿ ಹೋಗಿದ್ದೆ. ಆ ಕೆರೆ ಈಗ ಹೇಗಿದೆ, ಪಕ್ಷಿಗಳಿದ್ದಾವೋ ಇಲ್ಲವೋ ನೋಡೋಣವೆಂದುಕೊಂಡು ಬೆಳಗಿನ ಆರರ ಸಮಯದಷ್ಟೊತ್ತಿಗೆ ಆಗರ ಕೆರೆಯನ್ನು ತಲುಪಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದ ಕಾರಣ ಆಗರ ಕೆರೆ ತುಂಬಿ ನಿಂತಿತ್ತು. ಕೆರೆಯ ಒಂದು ಬದಿಯಲ್ಲಿ ನಮ್ಮ ಅಭಿವೃದ್ಧಿಯ ಕುರುಹಾಗಿ ಕೆಲವು ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಮತ್ತೊಂದು ತುದಿಯಲ್ಲಿ ಕಿರು ಅರಣ್ಯ ಹರಡಿಕೊಂಡಿತ್ತು. ಭಾನುವಾರವಾಗಿದ್ದರಿಂದ ಜನರ ಸಂಖ್ಯೆ ಹೆಚ್ಚಾಗಿಯೇ ಇತ್ತು.

ಬೆಳಗಿನ ಕಾಯಕ

ಕೆರೆಗಳು ನೀರು ತುಂಬಿಕೊಂಡಿರುವಾಗ ಪಕ್ಷಿಗಳ ಸಂಖೈ ಒಂದಷ್ಟು ಕಡಿಮೆಯೆಂದೇ ಹೇಳಬೇಕು. ಒಂದಷ್ಟು ಗುಳುಕಮುಳುಕ, ಬೆಳ್ಳಕ್ಕಿ, ಬೂದು ಕೊಕ್ಕರೆ, ನೀರುಕಾಗೆ ಬಿಟ್ಟರೆ ಹೆಚ್ಚಿನ ಪಕ್ಷಿಗಳು ಕಾಣಿಸಲಿಲ್ಲ. ಮಂಜು ಕೆರೆಯ ಮೇಲ್ಮೈಯನ್ನು ಆವರಿಸಿತ್ತು. ಮಂಜಿನ ಹಿನ್ನಲೆಯಲ್ಲಿ ಗುಳುಕಮುಳುಕದ ಫೋಟೋ ತೆಗೆಯುವಷ್ಟರಲ್ಲಿ ಮಂಜಿನ ಹೊದಿಕೆ ಮತ್ತಷ್ಟು ದಟ್ಟವಾಯಿತು. ಎದುರಿನ ಅರಣ್ಯದ ಭಾಗ ಕಾಣಿಸದಂತಾಯಿತು. ಬೆಳಕರಿಯುವ ಮುನ್ನವೇ ತೆಪ್ಪದಲ್ಲಿ ಮೀನಿಡಿಯಲು ಅತ್ತ ಕಡೆಗೆ ಸಾಗಿದ್ದವರು ಮಂಜಿನ ಹೊದಿಕೆಯಲ್ಲಿ ಇತ್ತ ಕಡೆಯ ತೀರಕ್ಕೆ ಸಾಗಿ ಬರುತ್ತಿದ್ದ ದೃಶ್ಯ ವೈಭವಯುತವಾಗಿತ್ತು. ಗಿಡಮರಗಳ ಪ್ರತಿಬಿಂಬದ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಕೊಂಡೆ. ಕೊಂಚ ಸಮಯದ ಕಳೆದ ನಂತರ ಮಂಜಿನ ಹೊದಿಕೆ ನಿಧಾನವಾಗಿ ಸರಿದುಕೊಳ್ಳಲಾರಂಭಿಸಿತಾದರೂ ರವಿಯು ಮೋಡದ ನಡುವಿನಿಂದ ಹೊರಬರಲು ಉತ್ಸಾಹ ತೋರಲಿಲ್ಲ.

ಆಹಾರದ ಹುಡುಕಾಟದಲ್ಲಿ

ಕೆಂಪು ಕಿಬ್ಬೊಟ್ಟೆಯ ಪಿಕಳಾರ

ಕೆಮ್ಮೀಸೆ ಪಿಕಳಾರ

 
ಗರುಡನ ಪ್ರತಿಬಿಂಬ



ತರುಣಿಯರ ಸ್ನೇಹ ಸಂಪಾದನೆ

ಮೋಡ ಮಂಜಿನಾಟದಲ್ಲಿ ರವಿಯ ಕಿರಣಗಳು


ಬಿಸಿಲಿಗೆ, ಚಳಿ ಕಡಿಮೆಯಾದ ಮೇಲೆ ನೀರಿಗಿಳಿಯಬಹುದಾದ ಪಕ್ಷಿಗಳಿಗೆ ಕಾಯುತ್ತ ಅಲ್ಲೆ ಒಂದೆಡೆ ದಡದ ಪಕ್ಕದಲ್ಲಿ ಕುಳಿತೆ. ಎಡಬದಿಯಲ್ಲಿ, ಸ್ವಲ್ಪ ದೂರದಲ್ಲಿ ಇಬ್ಬರು ಹುಡುಗಿಯರು ಕೆರೆಯ ಸುತ್ತಮುತ್ತಲಲ್ಲಿ ವಾಸ ಮಾಡಿಕೊಂಡಿದ್ದ ಕಪ್ಪು – ಬಿಳುಪು ನಾಯಿಯೊಂದರ ಜೊತೆ ಗೆಳೆತನ ಬೆಳೆಸಿಕೊಳ್ಳುತ್ತಿದ್ದರು. ಅವರು ಕುಳಿತಿದ್ದ ಜಾಗದಲ್ಲಿ ಬೆಳೆದಿದ್ದ ಹಳದಿ ಹೂವಿನ ಗಿಡದ ಹೊದಿಕೆ, ಆ ಇಬ್ಬರು ಹುಡುಗಿಯರು, ಅವರೊಡನೆ ಆಟವಾಡುತ್ತಿದ್ದ ನಾಯಿಯ ಪ್ರತಿಬಿಂಬವೆಲ್ಲವೂ ಕೆರೆಯ ಶಾಂತ ನೀರಿನಲ್ಲಿ ಚಿತ್ತಾರ ಮೂಡಿಸಿತ್ತು. ಇಂತಹ ದೃಶ್ಯಾವಳಿಯನ್ನು ಕಣ್ಣಿನಲ್ಲಷ್ಟೇ ಅಲ್ಲ, ಕ್ಯಾಮೆರಾದಲ್ಲೂ ಸೆರೆಹಿಡಿದರೆ ಚೆಂದವಲ್ಲವೇ ಎಂದುಕೊಳ್ಳುತ್ತಾ ಅವರನ್ನು ಕೂಗಿ ಕರೆದು ʻಒಂದು ಫೋಟೋʼ ಎಂದು ಕೇಳಿ ಅನುಮತಿ ತೆಗೆದುಕೊಂಡು ಫೋಟೊ ತೆಗೆದು ಅವರ ಬಳಿ ಹೋಗಿ ಮೊಬೈಲಿಗೆ ಕಳಿಸಿ ಮತ್ತೆ ಬಂದು ದಡದಲ್ಲಿ ಪಕ್ಷಿಗಳಿಗೆ ಕಾಯುತ್ತ ಕುಳಿತೆ. ನೀರ ಪಕ್ಷಿಗಳ ಸುಳಿವಿರಲಿಲ್ಲ. ಅಷ್ಟರಲ್ಲಿ ತೆಪ್ಪದಲ್ಲಿಡಿದು ತಂದಿದ್ದ ಮೀನುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭವಾಗಿತ್ತು. ಮೀನಿನ ಹೊಟ್ಟೆ, ಸಣ್ಣ ಕರುಳು, ದೊಡ್ಡ ಕರುಳು, ಹೃದಯಗಳನ್ನೆಲ್ಲಾ ನಾವು ತಿನ್ನುವುದಿಲ್ಲವಲ್ಲ. ಅದನ್ನೆಲ್ಲಾ ತೆಗೆಯುತ್ತಾ ಅಲ್ಲೇ ಮಣ್ಣಿನ ಮೇಲೆ ಒಂದಷ್ಟನ್ನು ನೀರಿಗೆ ಎಸೆಯುತ್ತಿದ್ದುದನ್ನೇ ಕಾಯುತ್ತಿದ್ದಂತೆ ಹತ್ತಾರು ಗರುಡಗಳು ಮತ್ತು ಒಂದೆರಡು ಹದ್ದುಗಳು ಕೆರೆಯ ಮೇಲಿನಾಕಾಶದಲ್ಲಿ ಪ್ರತ್ಯಕ್ಷವಾದವು. ಮೀನಿಡಿಯುವವರ ಗೆಳೆಯರೇ ಆಗಿಹೋಗಿದ್ದ ಈ ಪಕ್ಷಿಗಳು ಅವರ ತೀರ ಹತ್ತಿರ ಬಿದ್ದಿದ್ದ ಆಹಾರವನ್ನೂ ಹೊತ್ತೊಯ್ದು ಗಾಳಿಯಲ್ಲೇ ತಿಂದು ಮತ್ತೆ ಹಿಂದಿರುಗುತ್ತಿದ್ದವು. ನೀರಿಗೆ ಎಸೆಯುತ್ತಿದ್ದ ಆಹಾರವನ್ನು ಎತ್ತಿಕೊಳ್ಳಲು ಶಾಂತವಾಗಿದ್ದ ಕೆರಯ ನೀರಿನಲ್ಲಿ ಪಕ್ಷಿಗಳ ಪ್ರತಿಬಿಂಬ, ನೀರ ಹನಿಗಳ ಚಿಮ್ಮುವಿಕೆಯ ಫೋಟೋ ತೆಗೆಯಲು ಕ್ಯಾಮೆರಾದ ಶಟರ್‌ ವೇಗವನ್ನು ಹೆಚ್ಚಿಸಿಕೊಂಡೆ. ಮೋಡಗಳ ಮರೆಯಿಂದ ರವಿಯ ಕಿರಣಗಳು ಪಕ್ಷಿಗಳ ಮೇಲೆ, ನೀರ ಹನಿಗಳ ಮೇಲೆ ಬೀಳುತ್ತಾ ಸುಂದರ ಲೋಕವೇ ಕೆರೆಯ ಮೇಲೆ ಸೃಷ್ಟಿಯಾಯಿತು. ತೃಪ್ತಿಯಾಗುವಷ್ಟು ಫೋಟೋಗಳನ್ನು ತೆಗೆದು ದಡದಿಂದ ಎದ್ದವನಿಗೆ ಮೋಡ ಮಂಜಿನ ಹೊದಿಕೆಯಿಂದ ರವಿಯ ಕಿರಣಗಳು ನೃತ್ಯವಾಡುತ್ತಿದ್ದ ದೃಶ್ಯ ಕಂಡಿತು. ಕ್ಯಾಮೆರಾದ ಲೆನ್ಸ್‌ ಬದಲಿಸಿ ಬಣ್ಣರಹಿತ ʻನಾರ್ತರ್ನ್‌ ಲೈಟ್ಸಿನಂತೆʼ ಕಾಣುತ್ತಿದ್ದ ರವಿಯ ಕಿರಣಗಳ ಫೋಟೋ ತೆಗೆದುಕೊಂಡು ಬಂದವನಿಗೆ ಕೆರೆ ನೋಡಲು ಬಂದಿದ್ದ ಕೆಲವು ಫೇಸ್‌ಬುಕ್‌ ಗೆಳೆಯರು ಆಕಸ್ಮಿಕವಾಗಿ ಭೇಟಿಯಾದರು. ಅವರೊಡನೆ ಸ್ವಲ್ಪ ಸಮಯ ಹರಟಿ ಆಗರ ಕೆರೆಗೆ ವಿದಾಯವೇಳಿ ಹೊರಟೆ. ಕೆರೆಯ ದಡಕ್ಕೆ ಹೊಂದಿಕೊಂಡಿದ್ದ ಮರವೊಂದರ ಮೇಲೆ ಪಿಕಳಾರಗಳು ಕಾಣಿಸಿಕೊಂಡವು. ಬಿಸಿಲು ಬೀಳಲಾರಂಭಿಸಿದ್ದ ರೆಂಬೆಯ ಮೇಲೆ ಕುಳಿತು ಮೈಕಾಯಿಸಿಕೊಳ್ಳುತ್ತ, ಹಣ್ಣು ತಿನ್ನುತ್ತಿದ್ದ ಪಿಕಳಾರ ಹಕ್ಕಿಗಳು ʻಬರೀ ಕೆರೆಯೊಳಗಿನ ಪಕ್ಷಿಗಳ ಫೋಟೋ ತೆಗೆಯೋಕೆ ಬಂದಿದ್ದಾ? ಇಲ್ಲೇ ಇರುವ ನಮಗೆ ಬೆಲೆಯೇ ಇಲ್ಲ ಅಲ್ಲವೇ?ʼ ಎಂದು ಅಣಕಿಸಿದವು. ʻಹೇ ಹೇ ಹಂಗೇನಿಲ್ಲʼ ಎಂದೇಳುತ್ತಾ ಮತ್ತೆ ದೊಡ್ಡ ಲೆನ್ಸನ್ನು ಕ್ಯಾಮೆರಾಕ್ಕೆ ಹಾಕಿ ಪಿಕಳಾರ ಪಕ್ಷಿಗಳದೊಂದಷ್ಟು, ಅಲ್ಲೇ ದಡದ ಬಳಿ ಇದ್ದ ಮಿಂಚುಳ್ಳಿಯದೊಂದು ಫೋಟೋ ತೆಗೆದು ಒಂದು ಸುಂದರ ಸಮಾಧಾನಕರ ಬೆಳಗಿಗೆ ಕಾರಣವಾದ ಎಲ್ಲರಿಗೂ ಧನ್ಯವಾದಗಳನ್ನೇಳುತ್ತಾ ಕಾರು ಹತ್ತಿದೆ.
ಸಾಮಾನ್ಯ ಮಿಂಚುಳ್ಳಿ

Jan 16, 2025

ಬಿಬಿಎಂಪಿ ಪಾರ್ಕಿನಲ್ಲಿ ಸಿಕ್ಕ ನೊಣಹಿಡುಕಗಳು.

Indian paradise flycatcher/ ಬಾಲದಂಡೆ/ ರಾಜಹಕ್ಕಿ 
ಡಾ. ಅಶೋಕ್.‌ ಕೆ. ಆರ್

ಹೆಂಡ್ರುಗೆ ಆರ್‌.ಆರ್.‌ ನಗರದಲ್ಲಿ ಒಂದಷ್ಟು ಕೆಲಸವಿತ್ತು. ಅವಳನ್ನು ಬಿಟ್ಟು ನಾನು ಮಕ್ಕಳು ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದೆವು. ಎರಡು ತಾಸು ಸಮಯ ಕಳೆಯಬೇಕಿತ್ತು. ಗೂಗಲ್ಲಿನಲ್ಲಿ ಹತ್ತಿರದಲ್ಲಿರುವ ಪಾರ್ಕಿನ ಪಟ್ಟಿ ತೋರಿಸಲು ಕೇಳಿದೆ. ಎಲ್ಲದಕ್ಕಿಂತ ಸಮೀಪವಿದ್ದ ಹೆಸರಿಲ್ಲದ ಬಿಬಿಎಂಪಿ ಪಾರ್ಕಿಗೆ ಹೋದೆವು. ಮಕ್ಕಳಿಗೆ ಆಟವಾಡಲಿದ್ದ ಜಾಗದ ಹಿಂದೆ ಬಿದಿರಿನ ಪುಟ್ಟ ಮೆಳೆಯಿತ್ತು. ಬಿದಿರಿನ ಮೆಳೆಯ ಹಿಂದೆ ಎರಡು ಗಸಗಸೆ (ಸಿಂಗಾಪೂರ್‌ ಚೆರ್ರಿ) ಹಣ್ಣಿನ ಮರಗಳಿದ್ದವು. ಗಾತ್ರ ನೋಡಿದರೆ ಐದಾರು ವರ್ಷಗಳ ಆಯಸ್ಸು. ಅಳಿಲುಗಳು ಚಿಂವ್‌ಗುಟ್ಟುತ್ತಿದ್ದವು. ಗಸಗಸೆ ಮರದ ಬಳಿ ಇದ್ದಕ್ಕಿದ್ದಂತೆ ಅಚ್ಚ ಬಿಳುಪಿನ ಹಾಳೆಯೊಂದು ಮಣ್ಣಿನಿಂದ ಗಿಡದ ಕಡೆಗೆ ತೂರಿಹೋದಂತೆನ್ನಿಸಿತು. ಏನದು ಎಂದು ಕತ್ತೆತ್ತಿ ನೋಡಿದವನಿಗೆ ಕಂಡದ್ದು ಇಂಡಿಯನ್‌ ಪ್ಯಾರಡೈಸ್‌ ಫ್ಲೈಕ್ಯಾಚರ್‌ (ಬಾಲದಂಡೆ, ರಾಜಹಕ್ಕಿ). ಅರೆರೆ ಈ ಪಕ್ಷಿ ನೋಡಲೆಂದೇ ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿದ್ದೆನಲ್ಲವೇ? ದೂರದಲ್ಲಿ ಕಾಣಿಸಿತ್ತಷ್ಟೇ. ಕುಣಿಗಲ್ಲಿನ ಬಳಿ ಒಮ್ಮೆ ಕಂದು ಬಣ್ಣದಲ್ಲಿದ್ದ ನೊಣಹಿಡುಕ ಸಿಕ್ಕಿತ್ತು, ಸುಮಾರಾಗಿ ಹತ್ತಿರದಲ್ಲಿ. ಕುಕ್ಕರಹಳ್ಳಿ ಕೆರೆ, ಕಣ್ವ ಜಲಾಶಯದ ಬಳಿ ಹತ್ತಿರದಲ್ಲೇ ಸಿಕ್ಕಿತ್ತು, ಕ್ಯಾಮೆರಾ ಕೈಯಲ್ಲಿರಲಿಲ್ಲ. ಇವತ್ತೂ ಕ್ಯಾಮೆರಾ ಕೈಯಲ್ಲಿಲ್ಲದಾಗಲೇ ಇಷ್ಟು ಹತ್ತಿರದಲ್ಲಿ ಬಂದು ಕೂರಬೇಕಾ?! ಮಕ್ಕಳಿತ್ತ ಆಟವಾಡುತ್ತಿದ್ದರು. ನಾನು ಪಕ್ಷಿಯ ದಿನಚರಿಯನ್ನು ವೀಕ್ಷಿಸುತ್ತಿದ್ದೆ. ಅದರ ಉದ್ದನೆಯ ಬಾಲ ಗಾಳಿಯಲ್ಲಿ ತುಯ್ದಾಡುವುದನ್ನು ಕಾಣುವುದೇ ಒಂದು ಸೊಗಸು. ಅಷ್ಟು ಉದ್ದನೆಯ ಬಾಲವನ್ನೊತ್ತುಕೊಂಡು ಗಸಗಸೆ ಮರದ ಪೀಚು ಹಣ್ಣುಗಳು, ಎಲೆಗಳ ನಡುವಿದ್ದ ಸಣ್ಣ ಪುಟ್ಟ ಹುಳ – ನೊಣಗಳನ್ನು ಹಿಡಿಯಲು ಆಗೊಮ್ಮೆ ಈಗೊಮ್ಮೆ ನೆಲದ ಬಳಿ ಬಂದು ಮತ್ತೆ ಹಿಂದಿರುಗಿ ಗಸಗಸೆ ಮರ ಹಾಗು ಸುತ್ತಮುತ್ತಲಿದ್ದ ಇತರೆ ಮರಗಳ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಿತ್ತು. ಸುತ್ತಮುತ್ತಲೆಲ್ಲ ಮನೆಗಳೇ ಇರುವ ಜಾಗದಲ್ಲಿ ಇಂತಹ ಪಕ್ಷಿ ನೋಡಿದೆನೆಂದು ಹೇಳಿದರೆ ಯಾರಾದರೂ ನಂಬದೇ ಹೋದರೆ ಎಂಬ ನೆಪದಲ್ಲಿ ನನ್ನ ಸಮಾಧಾನಕ್ಕೆ ಮೊಬೈಲಿನಲ್ಲೇ ಸುಮ್ಮನೊಂದು ವೀಡಿಯೋ ತೆಗೆದೆ! ಈ ಉದ್ದ ಬಾಲದ ನೊಣಹಿಡುಕನ ಜೊತೆಯೇ ಕೆಂಪುಕೊರಳಿನ ನೊಣಹಿಡುಕುಗಳ (ಟಿಕೆಲ್ಸ್‌ ಬ್ಲೂ ಫ್ಲೈಕ್ಯಾಚರ್) ದರ್ಶನವೂ ಆಯಿತು. ʻಕ್ಯಾಮೆರಾ ಇಲ್ಲದಾಗಲೇ ಎಲ್ಲ ಬಂದು ಕುಣೀರಪ್ಪʼ ಎಂದು ಬಯ್ದುಕೊಂಡೆ!

Dec 28, 2024

ಕ್ಯಾಪಿಟಲಿಸಂ ಬಿಟ್ಟು ಬೇರೆ ಆಯ್ಕೆ ನಿಜಕ್ಕೂ ನಮ್ಮ ಮುಂದಿದೆಯೇ?

 

image source: yourdictionary

ಡಾ. ಅಶೋಕ್.‌ ಕೆ. ಆರ್.

ಯಾರಾದರೂ ಎಡಪಂಥೀಯ – ಬಲಪಂಥೀಯ ಅಂತ ಮಾತನಾಡುವಾಗ, ವಾದ ಮಾಡುವಾಗ ನಿಜಕ್ಕೂ ಈಗ ನಮ್ಮಲ್ಲಿ ಎಡಪಂಥೀಯತೆ – ಬಲಪಂಥೀಯತೆ ಅನ್ನುವುದಿದೆಯೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡುತ್ತಲೇ ಇರುತ್ತದೆ. ಈ ರೀತಿಯಾಗಿ ಮಾತನಾಡುವ, ವಾದ ಮಾಡುವ ನಾವೆಲ್ಲರೂ ಬಂಡವಾಳಶಾಹಿ – ಕ್ಯಾಪಿಟಲಿಸ್ಟುಗಳೇ ಅಲ್ಲವೇ ಎನ್ನುವ ಯೋಚನೆ ಸುಳಿಯುತ್ತದೆ. ಅಬ್ಬಬ್ಬಾ ಅಂದರೆ ಒಂಚೂರು ಎಡಕ್ಕಿರುವ ಅಥವಾ ಒಂದಷ್ಟು ಬಲಕ್ಕಿರುವ ಕ್ಯಾಪಿಟಲಿಸ್ಟುಗಳಷ್ಟೇ ಅಲ್ಲವೇ ನಾವು ಬಹುತೇಕರು…

ನರಸಿಂಹರಾವ್‌ ಕಾಲದಲ್ಲಿ, ಮನಮೋಹನ್‌ ಸಿಂಗ್‌ರವರು ಹಣಕಾಸು ಸಚಿವರಾಗಿದ್ದಾಗಿನ ಸಮಯದಲ್ಲಿ ಇಂಡಿಯಾ ಜಾಗತೀಕರಣಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿತು. ಹಲವು ವರುಷಗಳ ಕಾಲ ವಿಧವಿಧದ ವಿರೋಧಗಳನ್ನು ಈ ಹೊಸ ಆರ್ಥಿಕ ನೀತಿಗಳು ಎದುರಿಸಿತಾದರೂ ಅಂತಿಮವಾಗಿ ಕ್ಯಾಪಿಟಲಿಸಂ ಎನ್ನುವ ಸಿದ್ಧಾಂತವಲ್ಲದ ಸಿದ್ಧಾಂತ ಉಳಿದೆಲ್ಲ ಸಿದ್ಧಾಂತಗಳನ್ನು ಮೀರಿ ಜಯಿಸಲಾರಂಭಿಸಿತು ಎನ್ನುವುದು ತಿರಸ್ಕರಿಸಲಾಗದ ವಾಸ್ತವ.

Nov 22, 2024

ಎಲ್ಲೆಡೆ ಸಲ್ಲುವ “ಬಂಧಮುಕ್ತ”


ಡಾ. ಅಶೋಕ್. ಕೆ. ಆರ್
ಕೆಲವೊಂದು ಪುಸ್ತಕಗಳೇ ಹಾಗೆ, ನೇರಾನೇರ ಸಂಬಂಧವಿಲ್ಲದಿದ್ದರೂ ನಮ್ಮ ನಡುವಿನದೇ ಪುಸ್ತಕವೆನಿಸಿಬಿಡುತ್ತದೆ. ನಮ್ಮದಲ್ಲದ ಸಂಸ್ಕೃತಿಯ, ನಮ್ಮ ದೇಶದ್ದಲ್ಲದ, ನಮ್ಮ ಖಂಡದ್ದೂ ಅಲ್ಲದ ದೂರದ ದೇಶವೊಂದರ ಲೇಖಕಿಯ ಬರಹಗಳು ನಮ್ಮ ಸುತ್ತಮುತ್ತಲಿನ ಸಮಾಜಕ್ಕೇ ಕನ್ನಡಿ ಹಿಡಿದಂತಿರುವುದನ್ನು ಮೆಚ್ಚಬೇಕೋ ಅಲ್ಲಿರುವ ಸಂಕಷ್ಟ ದುಮ್ಮಾನಗಳು ನಮ್ಮಲ್ಲೂ ಇರುವುದಕ್ಕೆ ದುಃಖ ಪಡಬೇಕೋ ಎನ್ನುವ ಗೊಂದಲಗಳೊಂದಿಗೆಯೇ ಪುಸ್ತಕ ಓದಿ ಮುಗಿಸಿದೆ.
ಪುಸ್ತಕದ ವ್ಯಾಪ್ತಿ ಹಿರಿದಾದುದು. ಕಪ್ಪು ಜನರ ಬವಣೆ, ಕಪ್ಪು ಮಹಿಳೆಯರ ಬವಣೆ, ಸ್ತ್ರೀವಾದ, ಬದಲಾದ ಸಮಾಜದಲ್ಲಿ ಶೋಷಣೆಯ ರೂಪಗಳೂ ಮಾರ್ಪಾಡಾಗುವುದು, ಒಂದು ಕಾಲದಲ್ಲಿ ಶೋಷಣೆಗೊಳಗಾಗಿದ್ದವರೆ ಮತ್ತೊಂದು ಹಂತದಲ್ಲಿ ಶೋಷಕರಾಗುವ ಬಗೆಇವೆಲ್ಲದರ ಜೊತೆಗೆ ಮನುಕುಲದ ಅವನತಿಗೆ ಬಹುಮಖ್ಯ ಕಾರಣವಾದ ಸ್ವಪ್ರೀತಿಯ ಕೊರತೆಯ ಬಗೆಗಿನ ಒಳನೋಟಗಳನ್ನು ಕೊಡುವ ಪುಸ್ತಕ ಬೆಲ್ ಹುಕ್ಸ್ರವರಬಂಧ ಮುಕ್ತ, ಪ್ರೀತಿಯ ಹುಡುಕಾಟದಲ್ಲಿ ದಮನಿತರು”. ಶ್ರೀಮತಿ ಎಚ್.ಎಸ್ರವರ ಸಶಕ್ತ ಅನುವಾದವು ಪುಸ್ತಕವನ್ನು ಮತ್ತಷ್ಟು ಆಪ್ತಗೊಳಿಸುತ್ತದೆ.

Mar 13, 2024

ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್'


ಡಾ. ಅಶೋಕ್. ಕೆ. ಆರ್

ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್ ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿತ್ರ ಬ್ಲಿಂಕ್. ಗಟ್ಟಿ ಚಿತ್ರಕತೆಯಿದ್ದು ಉತ್ತಮ ನಿರ್ದೇಶನವಿದ್ದರೆ ಕಡಿಮೆ ಬಜೆಟ್ಟಿನಲ್ಲಿ, ಸುತ್ತಮುತ್ತಲಿರುವ ಕೆಲವೊಂದು ಜಾಗಗಳನ್ನು ಬಳಸಿಕೊಂಡೇ ಒಂದು ಉತ್ತಮ, ಉತ್ತಮವೇನು ಅತ್ಯುತ್ತಮ ಚಿತ್ರವನ್ನೇ ಜನರ ಮುಂದಿಡಬಹುದೆಂದು ಬ್ಲಿಂಕ್ ನಿರ್ದೇಶಕ ಶ್ರೀನಿಧಿ ತೋರಿಸಿಕೊಟ್ಟಿದ್ದಾರೆ.

ಅನಾದಿ ಕಾಲದಿಂದಲೂ ಆಗೊಮ್ಮೆ ಈಗೊಮ್ಮೆ ಎಲ್ಲಾ ಭಾಷೆಗಳಲ್ಲಿ ಟೈಂ ಟ್ರಾವೆಲ್ನ ಕುರಿತಾದ ಚಿತ್ರಗಳು ಮೂಡಿಬರುತ್ತಲೇ ಇವೆ. ವಾಸ್ತವದಲ್ಲಿರುವುದನ್ನು ಬಿಟ್ಟು ಹಿಂದಿನ ಮುಂದಿನ ಸಮಯಕ್ಕೆ ಹೋಗುವಾಸೆ ಮನುಷ್ಯನಿಗೆ ಇದ್ದೇ ಇದೆಯಲ್ಲ! ಲಾಜಿಕ್ಕಾಗಿ ನೋಡಿದರೆ ಟೈಂ ಟ್ರಾವೆಲ್ ಅನ್ನೋದೆ ಇಲ್ಲಾಜಿಕಲ್! ಹಂಗಾಗಿ ಟೈಂ ಟ್ರಾವೆಲ್ ಯಾವ ರೀತಿ ಮಾಡಿದರು ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ವಾಚ್ ಕಟ್ಟಿಕೊಂಡು, ಟೈಂ ಮೆಷೀನಿನ ಒಳಗೆ ಕುಳಿತುಕೊಂಡು, ಏನನ್ನೋ ಕುಡಿದುಹೀಗೆ ಹತ್ತಲವು ರೀತಿಯಲ್ಲಿ ಟೈಂ ಟ್ರಾವೆಲ್ಲನ್ನು ಚಿತ್ರಗಳಲ್ಲಿ ತೋರಿಸಿದ್ದಾರೆ, ಬ್ಲಿಂಕ್ ಚಿತ್ರದಲ್ಲಿ ಅಡ್ವಾನ್ಸ್ಡ್ ಲ್ಯಾಪ್ ಟಾಪಿನ ಮುಂದೆ ಕುಳಿತುಕೊಂಡು ದ್ರವ್ಯವೊಂದನ್ನು ಕಣ್ಣಿಗೆ ಎರಡು ತೊಟ್ಟು ಹಾಕಿಕೊಂಡರೆ ಸಾಕು ನಮಗೆ ಯಾವ ಹಿಂದಿನ ಕಾಲಕ್ಕೆ ಹೋಗಬೇಕೋ ಅಲ್ಲಿಗೆ ಹೋಗಿಬಿಡಬಹುದು. ಹೇ! ಅಷ್ಟು ಸುಲಭದಲ್ಲಿ ಟೈಂ ಟ್ರಾವೆಲ್ ಮಾಡಿಬಿಡಬಹುದಾ ಅಂತೆಲ್ಲ ಕೇಳಬೇಡಿ. ಟೈಂ ಟ್ರಾವೆಲ್ ಅನ್ನೋದೆ ಅಸಾಧ್ಯವಾಗಿರುವಾಗ ಅಷ್ಟು ಸುಲಭದಲ್ಲೋ ಇಷ್ಟು ಕಷ್ಟದಲ್ಲೋ ಅನ್ನೋದೆಲ್ಲ ಇಲ್ಲಾಜಿಕಲ್ ಪರಿಧಿಯೊಳಗೇ ಇರ್ತದೆ!

Apr 18, 2023

ಕಾಡಿನ ನ್ಯಾಯಕ್ಕೆ ವಿರುದ್ಧವಾದ "ದಿ ಎಲಿಫೆಂಟ್ ವಿಸ್ಪರರ್ಸ್"

ಚಿತ್ರಮೂಲ: ಎಕನಾಮಿಕ್ ಟೈಮ್ಸ್
ಡಾ. ಅಶೋಕ್. ಕೆ. ಆರ್

ಕಾಡ ನಡುವಿನಲ್ಲಿ ಮರಿಯಾನೆಯೊಂದು ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗುತ್ತದೆ. ಆಹಾರ ಹುಡುಕುವ, ನೀರನ್ನರಸುವ ಗುಣಗಳನ್ನು ಹಿಂಡಿನ ಹಿರಿಯರಿಂದ ಇನ್ನೂ ಕಲಿಯದ ಮರಿಯಾನೆಗೆ ಜೀವವುಳಿಸಿಕೊಳ್ಳುವುದು ಕಷ್ಟದ ಸಂಗತಿಯೇ ಸರಿ. ಮರಿಯಾನೆಯ ಕೂಗಾಟ ಅರಣ್ಯ ಇಲಾಖೆಯ ಕಿವಿಗೆ ತಲುಪುತ್ತದೆ. ಕಾಡಿನ ನಿಯಮಗಳಿಂದ ರಕ್ಷಿಸಲ್ಪಟ್ಟ ಈ ಮರಿಯಾನೆಯನ್ನು ಸಾಕುವ ಜವಾಬ್ದಾರಿಯನ್ನು ಇಲಾಖೆಯ ಕೆಲಸಗಾರರಾದ, ಮೂಲತಃ ಆದಿವಾಸಿಗಳಾದ ಇಬ್ಬರಿಗೆ ವಹಿಸಲಾಗುತ್ತದೆ. ಆ ಈರ್ವರ ನಡುವಿನ ವೈಯಕ್ತಿಕ ಸಂಬಂಧ, ಆನೆಯನ್ನು ಸಾಕಿ ಸಲಹುವ ಪರಿ, ಆನೆ ಜೊತೆಗಿನ ಮಮಕಾರದ ಸಂಬಂಧವೇ "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರದ ಹೂರಣ. 

ಆಸ್ಕರ್ರಿಗೆ ಭಾರತದಿಂದ ಕಳುಹಿಸಲ್ಪಟ್ಟ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮವೆಂಬ ಪ್ರಶಸ್ತಿಯೂ ದೊರೆತು ಖ್ಯಾತಿಗಳಿಸಿದ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ನೋಡಲು ಲಭ್ಯವಿದೆ. ಆಸ್ಕರ್ ದೊರೆಯುವ ಮುಂಚೆ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದೆ. ನೋಡಿದ ಯಾರಿಗಾದರೂ ಕಣ್ಣಂಚಿನಲ್ಲಿ ನೀರು ತರಿಸುವ ಚಿತ್ರವಿದು. ನಾನೂ ಅದಕ್ಕೆ ಹೊರತಲ್ಲ.

Aug 19, 2022

ಎಲ್ಲಕಿಂತ ಜೀವ ಮುಖ್ಯ…

- ಡಾ. ಅಶೋಕ್.‌ ಕೆ. ಆರ್‌

ಪೂರ್ವಿಕಾಳ ಹೆಸರಿನಿಂದ (ಹೆಸರು ಬದಲಿಸಲಾಗಿದೆ) ಫೇಸ್‌ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಬಂದಿತ್ತು. ನಲವತ್ತು ಚಿಲ್ಲರೆ ಮಂದಿ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಮುಂಚಿನಂತೆ ಬಂದೆಲ್ಲ ಸ್ನೇಹಿತರ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲವಾದ್ದರಿಂದ ಪೂರ್ವಿಕಾಳ ಪ್ರೊಫೈಲಿನ ಮೇಲೆ ಕ್ಲಿಕ್ಕಿಸಿದೆ. ಸುಳ್ಯದ ವಿದ್ಯಾರ್ಥಿನಿಯ ಫೋಟೋ ಇದ್ದ ಪ್ರೊಫೈಲದು. ಸುಳ್ಯದ ಹಳೆಯ ವಿದ್ಯಾರ್ಥಿಗಳೇ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಸ್ನೇಹದ ಕೋರಿಕೆಯನ್ನು ಒಪ್ಪಿಕೊಂಡ ದಿನದ ನಂತರ ಪೂರ್ವಿಕಾಳ ಪ್ರೊಫೈಲಿನಿಂದ ಮೆಸೆಂಜರ್‌ನಲ್ಲಿ ʻಹಾಯ್‌ʼ ಎಂದೊಂದು ಮೆಸೇಜು ಬಂದಿತ್ತು. ಮೆಸೇಜುಗಳನ್ನು ಆಗಾಗ್ಯೆ ನೋಡುವ ಅಭ್ಯಾಸವಿಲ್ಲದ ಕಾರಣ ಒಂದಷ್ಟು ಸಮಯದ ನಂತರ ʻಹಾಯ್‌ʼ ಎಂದು ಉತ್ತರಿಸಿ ʻಹೇಗಿದ್ದೀಯಪ್ಪ?ʼ ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಪೂರ್ವಿಕಾ ಕೇರಳದ ಹುಡುಗಿ ಎಂದು ನೆನಪಿತ್ತು. ʻನಾನು ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಿ?ʼ ಎಂದು ಕೇಳಿದವಳು ನನ್ನ ಮರುತ್ತರಕ್ಕೂ ಕಾಯದೆ ನಿಮ್ಮ ವಾಟ್ಸಪ್‌ ನಂಬರ್‌ ಕಳುಹಿಸಿ ಅಲ್ಲಿಯೇ ಚಾಟ್‌ ಮಾಡುವ ಎಂದು ಕೇಳಿದಳು. ಓಹ್!‌ ಇದು ಅಸಲಿ ಖಾತೆ ಇರಲಿಕ್ಕಿಲ್ಲ ಎಂದರಿವಾಯಿತಾಗ. ಹಳೆಯ ವಿದ್ಯಾರ್ಥಿಗಳು ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಕೇಳಲು, ಅಥವಾ ಬಹಳ ವರುಷಗಳ ನಂತರ ಮಾತನಾಡಲು ಫೋನ್‌ ನಂಬರ್‌ ಕೇಳುವುದು ಅಪರೂಪವೇನಲ್ಲ. ಆದರೆ ಚಾಟ್‌ ಮಾಡಲು ವಾಟ್ಸಪ್‌ ನಂಬರ್‌ ಕೇಳುವುದು ಸಾಮಾನ್ಯ ಸಂಗತಿಯೇನಲ್ಲ. ಪರಿಚಿತರ ಫೋಟೋ ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಸ್ನೇಹದ ಕೋರಿಕೆ ಕಳುಹಿಸಿ ಮೆಸೆಂಜರ್‌ನಲ್ಲಿ ʻತುರ್ತು ಅವಶ್ಯಕತೆ ಇದೆ. ಒಂದೈದು ಸಾವಿರ ಗೂಗಲ್‌ ಪೇ ಮಾಡಿʼ ಎಂದು ಬೇಡಿಕೆ ಇಡುವ ಸ್ಕ್ಯಾಮು ಹೆಚ್ಚಿದೆ. ಇಲ್ಲಿ ಹಣದ ಬೇಡಿಕೆಯೂ ಇಲ್ಲದೆ ವಾಟ್ಸಪ್‌ ನಂಬರ್‌ ಕೇಳುತ್ತಿದ್ದಾರಲ್ಲಾ? ಇದ್ಯಾವ ಹೊಸ ಮೋಸದ ಯೋಜನೆಯಿರಬಹುದು ಎಂಬ ಕುತೂಹಲವುಂಟಾಯಿತು. ನವಮೋಸದ ಪರಿ ಹೇಗಿರಬಹುದೆಂದು ತಿಳಿಯಬಯಸುವ ಆಸಕ್ತಿಯಿಂದ ವಾಟ್ಸಪ್‌ ನಂಬರ್‌ ಅನ್ನು ಕಳುಹಿಸಿದೆ. ಮೊದಲ ದಿನ ʻಹಾಯ್‌ʼʻಬಾಯ್‌ʼ ಮೆಸೇಜಿವೆ ಸಂವಹನ ಸೀಮಿತವಾಗಿತ್ತು. ಮಾರನೆಯ ದಿನ ಮತ್ತೇನೂ ಹೆಚ್ಚಿನ ಸಂವಾದಗಳಿಲ್ಲದೆ ಸೀದಾ ಸಾದಾ ವೀಡಿಯೋ ಕರೆ ಮಾಡುವ ಬೇಡಿಕೆ ಅತ್ತಲಿಂದ ಬಂತು. ಇವರ ಮೋಸದ ಹೊಸ ಯೋಜನೆಯ ರೂಪುರೇಷೆ ಸೂಕ್ಷ್ಮವಾಗಿ ಅರಿವಾಯಿತಾದರೂ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳುವ ಉತ್ಸಾಹವಿನ್ನೂ ಕಡಿಮೆಯಾಗಿರಲಿಲ್ಲ! ʻವೀಡಿಯೋ ಕರೆ ಯಾಕೆ?ʼ ಎಂದು ಮುಗ್ಧನಂತೆ ಕೇಳಿದೆ. ಮೆಸೇಜುಗಳಲ್ಲಿ ನಾನಿನ್ನೂ ಅತ್ತಲಿನವರನ್ನು ನನ್ನ ಹಳೆಯ ವಿದ್ಯಾರ್ಥಿನಿಯೆಂದೇ ತಿಳಿದುಕೊಂಡಿರುವಂತೆ ನಂಬಿಸಿದೆ. ʻನಾನೊಬ್ಳೇ ಇದೀನಿ. ವೀಡಿಯೋ ಕರೆ ಮಾಡಿ. ಬಾತ್‌ರೂಮಿಗೆ ಹೋಗಿ ಕಾಲ್‌ ಮಾಡಿʼ ಎಂದು ನೇರಾನೇರ ಅಶ್ಲೀಲ ವೀಡಿಯೋ ಕರೆಗೆ ಬೇಡಿಕೆ ಬಂತು! ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂದು ಟೈಪಿಸಿದ್ದನ್ನು ಕಳುಹಿಸುವುದಕ್ಕೆ ಮೊದಲೆಯೇ ವೀಡಿಯೋ ಕರೆ ಬಂದಿತು! ಕಾಲೇಜಿಗೆ ಹೊರಡುತ್ತಿದ್ದವನು ಇವರ ಆಟ ಪೂರ್ತಿಯೇ ನೋಡಿಬಿಡುವ ಎಂದು ಕರೆ ಸ್ವೀಕರಿಸಿದೆ. ಅತ್ತ ಕಡೆ ಹುಡುಗಿಯೊಬ್ಬಳಿದ್ದಳು. ಖಂಡಿತಾ ಸುಳ್ಯದ ವಿದ್ಯಾರ್ಥಿನಿ ಪೂರ್ವಿಕಾಳಲ್ಲ ಅವಳು. ಅತ್ತ ಕಡೆ ಹುಡುಗಿ ಇದ್ದಿದ್ದೂ ಅನುಮಾನವೇ, ಕಂಪ್ಯೂಟರಿನಲ್ಲಿದ್ದ ಹುಡುಗಿಯ ವೀಡಿಯೋ ಒಂದನ್ನು ಬಳಸಿಕೊಂಡಂತನ್ನಿಸಿತು. ಆರೇಳು ಸೆಕೆಂಡುಗಳಲ್ಲಿ ಕರೆ ತುಂಡಾಯಿತು. ʻಬಾತ್‌ರೂಮಿಗೆ ಹೋಗಿ. ಸೆಕ್ಸ್‌ ವೀಡಿಯೋ ಕರೆ ಮಾಡುವʼ ಎಂದು ಬಂದ ಮೆಸೇಜಿಗೆ ಈಗಾಗಲೇ ಟೈಪಿಸಿದ್ದ ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂಬ ಮೆಸೇಜನ್ನು ಕಳುಹಿಸಿ ಕಾಲೇಜಿಗೆ ಹೊರಟೆ. ಸಂಜೆ ವಾಟ್ಸಪ್ಪಿನಲ್ಲಿ ಪುಟ್ಟ ವೀಡಿಯೋ ಒಂದನ್ನು ಕಳುಹಿಸಿದ್ದರು. ಆರು ಸೆಕೆಂಡಿನ ನನ್ನ ಬೆಳಗಿನ ವೀಡಿಯೋ ಕರೆ ರೆಕಾರ್ಡು ಮುಗಿದ ನಂತರ ಬಚ್ಚಲು ಮನೆಯಲ್ಲಿ ಪುರುಷನೊಬ್ಬ ಜನನಾಂಗ ತೋರಿಸಿರುವ ಮತ್ತೊಂದು ತುಣುಕನ್ನು ಸೇರಿಸಿ ಮಾಡಲಾಗಿದ್ದ ವೀಡಿಯೋ ಅದು. ವೀಡಿಯೋ ಹಿಂದೆಯೇ ಒಂದಷ್ಟು ಸ್ಕ್ರೀನ್‌ಶಾಟುಗಳನ್ನು ಕಳಿಸಿದರು. ಫೇಸ್‌ಬುಕ್ಕಿನ ನನ್ನ ಪ್ರೊಫೈಲಿನಲ್ಲಿದ್ದ ನನ್ನ ನೆಂಟರಿಷ್ಟರ ಕಸಿನ್ಸುಗಳ ಪಟ್ಟಿ ಅದು. ನಾವು ಕೇಳಿದಷ್ಟು ಹಣ ನೀಡದಿದ್ದರೆ ಈ ಪಟ್ಟಿಯಲ್ಲಿರುವ ನಿಮ್ಮ ಕಸಿನ್ಸುಗಳಿಗೆಲ್ಲ ಈ ವೀಡಿಯೋ ಕಳಿಸುತ್ತೀವಿ. ನಿಮ್ಮ ಮಾನ ಮರ್ಯಾದೆ ಹೋಗ್ತದೆ, ಯೋಚನೆ ಮಾಡಿ. ತುರ್ತು ಪ್ರತಿಕ್ರಿಯಿಸಿ ಎಂಬ ಮೆಸೇಜು ಹಿಂದಿ ಭಾಷೆಯಲ್ಲಿ ಬಂದಿತ್ತು. ʻಇದು ನನ್ನ ವೀಡಿಯೋನೆ ಅಲ್ಲ. ಯಾರಿಗಾದರೂ ಕಳಿಸಿಕೊಳ್ಳಿʼ ಎಂದುತ್ತರಿಸಿದೆ. ಕರೆ ಬಂತು. ಸ್ವೀಕರಿಸಿದೆ. ಜೋರು ಹಿಂದಿಯಲ್ಲಿ ಹಣದ ಬೇಡಿಕೆ ಇರಿಸಿದರು. ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಸಿದೆ. ಯಾವ ಪೋಲೀಸರ ಬಳಿಯಾದರೂ ಹೋಗಿ. ನಮಗೇನೂ ಹೆದರಿಕೆ ಇಲ್ಲ ಎಂದರು. ಯಾರಿಗಾದರೂ ವೀಡಿಯೋ ಕಳಿಸಿಕೊಳ್ಳಿ, ನಿಮ್ಮ ಹಣೆಬರಹ ಎಂದೇಳಿ ಫೋನಿಟ್ಟೆ. ಪಟ್ಟಿಯಲ್ಲಿದ್ದ ಕೆಲವು ಕಸಿನ್ಸುಗಳಿಗೆ ಮೆಸೆಂಜರ್‌ನಲ್ಲಿ ವೀಡಿಯೋ ಕಳುಹಿಸಿದ ಸ್ಕ್ರೀನ್‌ ಶಾಟುಗಳನ್ನು ತೆಗೆದು ನನಗೆ ಕಳುಹಿಸಿ ʻಇನ್ನೂ ಅವರು ವೀಡಿಯೋ ನೋಡಿಲ್ಲ. ದುಡ್ಡು ಕಳುಹಿಸಿದರೆ ವೀಡಿಯೋ ಡಿಲೀಟ್‌ ಮಾಡ್ತೀನಿʼ ಎಂದವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಫೇಸ್‌ಬುಕ್ಕಿನಲ್ಲಿ ಘಟನೆ ಕುರಿತಾಗಿ ವಿವರವಾಗಿ ಬರೆದು ʻಪೂರ್ವಿಕಾʼಳ ನಕಲಿ ಖಾತೆಯನ್ನು ಟ್ಯಾಗ್‌ ಮಾಡಿ ಫೋನ್‌ ನಂಬರ್‌ ಹಾಕಿ ʻಈ ರೀತಿಯೂ ಮೋಸ ಮಾಡುತ್ತಿದ್ದಾರೆ. ಎಚ್ಚರಿಕೆʼ ಎಂದು ಪೋಸ್ಟ್‌ ಮಾಡಿದೆ. ಒಂದಷ್ಟು ಸ್ನೇಹಿತರು, ವಿದ್ಯಾರ್ಥಿಗಳು ಅವರಿಗೂ ಈ ರೀತಿ ವೀಡಿಯೋ ಕಾಲ್‌ ಮಾಡುವಂತೆ ಮೆಸೇಜುಗಳು ಬಂದಿದ್ದರ ಬಗ್ಗೆ ತಿಳಿಸಿದರು. ಇನ್ನೊಂದಷ್ಟು ಜನರು ತಮ್ಮ ಪರಿಚಯಸ್ಥರು ಈ ರೀತಿಯ ವಂಚನೆಗೆ ಸಿಕ್ಕಿ ಫೇಸ್‌ಬುಕ್ಕನ್ನೇ ತೊರೆದ ಬಗ್ಗೆ ಮೆಸೇಜು ಮಾಡಿ ತಿಳಿಸಿದರು. ಇವ ಬಡಪಟ್ಟಿಗೆ ಸಿಗುವ ಆಳಲ್ಲ ಎಂದರಿವಾಗಿ ಪೂರ್ವಿಕಾಳ ನಕಲಿ ಖಾತೆಯವ ನನ್ನನ್ನು ಫೇಸ್‌ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬ್ಲಾಕ್‌ ಮಾಡಿಬಿಟ್ಟ.

Nov 28, 2021

ನೀಟ್ ಪರೀಕ್ಷೆಯ ಸುತ್ತ.

ವರುಷಕ್ಕೊಂದು ಸಲ ನೀಟ್‌ ಪರೀಕ್ಷೆಯಿಂದಾಗುವ (ಯುಜಿ ನೀಟ್)‌ ʼಅನಾಹುತʼಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಚರ್ಚೆಗಳಲ್ಲಿ ಕಂಡುಬರುವ ಹೆಚ್ಚಿನ ವಿಚಾರಗಳೆಂದರೆ:

೧. ನೀಟ್‌ ಪರೀಕ್ಷೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗದಂತೆ ನೀಟ್‌ ಮಾಡಿಬಿಟ್ಟಿದೆ.

೨. ನೀಟ್‌ ಪರೀಕ್ಷೆಯಿಂದ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಸೀಟು ಕಬಳಿಸುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.

೩. ಪರೀಕ್ಷೆಗಳು ರಾಜ್ಯಗಳ ನಿಯಂತ್ರಣದಲ್ಲಿರಬೇಕೆ ಹೊರತು ಒಕ್ಕೂಟ ಸರಕಾರದ ನಿಯಂತ್ರಣದಲ್ಲಿರಬಾರದು.

Oct 24, 2020

ಒಂದು ಬೊಗಸೆ ಪ್ರೀತಿ - 85 - ಕೊನೆಯ ಅಧ್ಯಾಯ.

ಡಾ. ಅಶೋಕ್.‌ ಕೆ. ಆರ್.
ರಾಜೀವ್‌ಗೆ ಡೈವೋರ್ಸ್‌ ಬಗ್ಗೆ ತಿಳಿಸಿ, ರಾಮ್‌ಪ್ರಸಾದ್‌ಗೂ ವಿಷಯ ತಿಳಿಸಿ ಸುಮಾ ಜೊತೆ ಹಂಚಿಕೊಂಡು ಮಾರನೇ ದಿನ ಸಾಗರನಿಗೂ ವಿಷಯ ತಿಳಿಸಿದ ಮೇಲೆ ಮನಸ್ಸಿಗೊಂದು ನಿರಾಳತೆ ಮೂಡಿತ್ತು. ಬಹಳ ದಿನಗಳ ನಂತರ ಮೂಡಿದ ನಿರಾಳತೆಯದು. ಈ ನಿರಾಳ ಮನಸ್ಸಿನೊಂದಿಗೆ ಒಂದು ದಿನದ ಮಟ್ಟಿಗಾದರೂ ನಾನು ನಾನಾಗಷ್ಟೇ ಉಳಿದುಕೊಳ್ಳಬೇಕು. ಡ್ಯೂಟಿಗೆ ರಜೆ ಹಾಕಿದೆ. ರಜಾ ಹಾಕಿದ ವಿಷಯ ಅಮ್ಮನಿಗೆ ತಿಳಿಸಿದರೆ ಮಗಳನ್ನು ಕೈಗೆ ಕೊಟ್ಟುಬಿಡುತ್ತಾರೆ. ಉಹ್ಞೂ, ಇವತ್ತಿನ ಮಟ್ಟಿಗೆ ಮಗಳೂ ಬೇಡ. ಮೊಬೈಲಂತೂ ಬೇಡವೇ ಬೇಡ ಎಂದುಕೊಂಡು ಮನೆಯಲ್ಲೇ ಮೊಬೈಲು ಬಿಟ್ಟು ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಮೊಬೈಲ್‌ ಮನೇಲೇ ಮರೆತೆ. ಸಂಜೆ ಬರೋದು ಸ್ವಲ್ಪ ತಡವಾಗ್ತದೆ ಅಂತೇಳಿ ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ ಮೊದಲಿಗೆ. ಜೆ.ಎಸ್.ಎಸ್‌ ಹತ್ರ ಹೊಸ ಮಾಲ್‌ ಒಂದು ಶುರುವಾಗಿದೆಯಲ್ಲ, ಅಲ್ಲಿಗೇ ಹೋಗುವ ಎಂದುಕೊಂಡು ಹೊರಟೆ. ಜೆ.ಎಸ್.ಎಸ್‌ ದಾಟುತ್ತಿದ್ದಂತೆ ಚಾಮುಂಡವ್ವ ಕರೆದಂತಾಗಿ ಗಾಡಿಯನ್ನು ಸೀದಾ ಬೆಟ್ಟದ ಕಡೆಗೆ ಓಡಿಸಿದೆ. ಮೊದಲೆಲ್ಲ ಪ್ರಶಾಂತವಾಗಿರುತ್ತಿದ್ದ ಚಾಮುಂಡಿ ಬೆಟ್ಟದಲ್ಲೀಗ ಜನರ ಕಲರವ ಹೆಚ್ಚು. ಶನಿವಾರ, ಭಾನುವಾರ, ರಜಾ ದಿನಗಳಲ್ಲಂತೂ ಕಾಲಿಡಲೂ ಜಾಗವಿರುವುದಿಲ್ಲ. ಇವತ್ತೇನೋ ವಾರದ ಮಧ್ಯೆಯಾಗಿರುವುದರಿಂದ ಜನರ ಸಂಚಾರ ಕಮ್ಮಿ. ಮುಂಚೆಯೆಲ್ಲ ಭಾನುವಾರ ಎಷ್ಟು ಜನರಿರುತ್ತಿದ್ದರೋ ಇವತ್ತು ಅಷ್ಟಿದ್ದಾರೆ. ಹೆಚ್ಚಿನಂಶ ಕಾಲೇಜು ಬಂಕು ಮಾಡಿ ಜೋಡಿಯಾಗಿ ಬಂದವರೇ ಹೆಚ್ಚು. 

ದೇಗುಲದ ಒಳಗೋಗಿ ಕೈಮುಗಿದು ಹೊರಬಂದು ದೇವಸ್ಥಾನದ ಹಿಂದಿರುವ ಬೆಂಚುಗಳ ಮೇಲೆ ಕುಳಿತುಕೊಂಡೆ. ಎದುರಿಗೆ ವಿಶಾಲವಾಗಿ ಚಾಚಿಕೊಳ್ಳುತ್ತಿರುವ ಮೈಸೂರು. ಬೆಂಗಳೂರಿನ ಟ್ರಾಫಿಕ್ಕು ಜಂಜಾಟದಿಂದ ಬಂದವರು ಮೈಸೂರು ಚೆಂದವಪ್ಪ, ಎಷ್ಟು ಕಡಿಮೆ ಟ್ರಾಫಿಕ್ಕು ಅಂತ ಲೊಚಗುಟ್ಟುತ್ತಾರೆ. ಮೈಸೂರಲ್ಲೇ ಹುಟ್ಟಿ ಬೆಳೆದವಳಿಗೆ ಇಲ್ಲಿನ ಟ್ರಾಫಿಕ್ಕು ಎಷ್ಟೆಲ್ಲ ಜಾಸ್ತಿಯಾಗಿಬಿಟ್ಟಿದೆ ಅನ್ನುವುದು ಅರಿವಿಗೆ ಬರ್ತಿದೆ. ಎಷ್ಟೊಂದು ಕಡೆ ಹೊಸ ಹೊಸ ಟ್ರಾಫಿಕ್‌ ಸಿಗ್ನಲ್ಲುಗಳಾಗಿಬಿಟ್ಟಿದ್ದಾವಲ್ಲ ಈಗ. 

ಬೆಟ್ಟದ ಮೇಲೆ ಬಂದು ಕುಳಿತವಳಿಗೆ ಪುರುಷೋತ್ತಮನ ನೆನಪಾಗದೇ ಇರುವುದು ಸಾಧ್ಯವೇ? ಹೊಸ ಬಡಾವಣೆಗಳನ್ನು ಬಿಟ್ಟರೆ ಇನ್ನೆಲ್ಲ ರಸ್ತೆಗಳಲ್ಲೂ ಪುರುಷೋತ್ತಮನ ನೆನಪುಗಳಿವೆ. ನನ್ನಿವತ್ತಿನ ಪರಿಸ್ಥಿತಿಗೆ ಪುರುಷೋತ್ತಮನೇ ಕಾರಣನಲ್ಲವೇ? ಪುರುಷೋತ್ತಮ ಕಾರಣನೆಂದರೆ ನನ್ನ ತಪ್ಪುಗಳನ್ನೂ ಅವನ ಮೇಲೊರಸಿ ತಪ್ಪಿಸಿಕೊಳ್ಳುವ ನಡೆಯಾಗ್ತದೆ. ಅವನ ಪ್ರೀತಿಯನ್ನು ಒಪ್ಪಿದ್ದು ತಪ್ಪೋ, ಅವನು ನನ್ನ ಮೇಲೆ ಹೊರಿಸಿದ ಅಭಿಪ್ರಾಯಗಳನ್ನು ನಗುನಗುತ್ತಾ ಒಪ್ಪಿಕೊಂಡದ್ದು ತಪ್ಪೋ, ದೈಹಿಕ ದೌರ್ಜನ್ಯವನ್ನೂ ಪ್ರೀತಿಯ ಭಾಗ ಎಂದುಕೊಂಡದ್ದು ತಪ್ಪೋ, ಅವನು ಅಷ್ಟೆಲ್ಲ ಕೇಳಿಕೊಂಡರೂ ಓಡಿಹೋಗದೇ ಇದ್ದದ್ದು ತಪ್ಪೋ, ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದು ತಪ್ಪೋ..... ಭೂತದಲ್ಲಿ ಮಾಡಿದ ತಪ್ಪುಗಳನ್ನು ಈ ರೀತಿ ನಿಕಷಕ್ಕೊಳಪಡಿಸುವುದು ಎಷ್ಟರಮಟ್ಟಿಗೆ ಸರಿ? ಪುರುಷೋತ್ತಮನ ನೆನಪುಗಳನ್ನು ದೂರ ಮಾಡಬೇಕೆಂದು ಅತ್ತಿತ್ತ ನೋಡಿದಷ್ಟೂ ಎಲ್ಲೆಡೆಯೂ ಜೋಡಿಗಳೇ ಕಂಡರು. ನೆನಪುಗಳು ಮತ್ತಷ್ಟು ಹೆಚ್ಚಾಯಿತಷ್ಟೇ! ಇಲ್ಲಿರೋ ಜೋಡಿಗಳಲ್ಲಿ ಇನ್ನೆಷ್ಟು ಜೋಡಿಗಳ ಕನಸುಗಳು ಮುರಿದು ಬೀಳ್ತವೋ ಏನೋ... ಜಾತಿ ಧರ್ಮ ಅಂತಸ್ತುಗಳ ಬೃಹತ್‌ ಗೋಡೆಗಳನ್ನು ಎಷ್ಟು ಮಂದಿ ದಾಟಲು ಸಾಧ್ಯವಿದೆಯೋ... ಅವನ್ನೆಲ್ಲ ದಾಟುವ ಉತ್ಸಾಹವಿದ್ದರೂ ಮಕ್ಕಳ ಮೇಲೆ ಪ್ರಭುತ್ವ ಸಾಧಿಸಲು ಹಾತೊರೆಯುವ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವಿದೆಯೋ... ದಾಟುವ ಉಮ್ಮಸ್ಸು ನನಗೂ ಇತ್ತು ಪುರುಷೋತ್ತಮನಿಗೂ ಇತ್ತು... ಸುಖಾಂತ್ಯಗೊಳಿಸುವಷ್ಟು ಉಮ್ಮಸ್ಸಿರಲಿಲ್ಲ... ಪುರುಷೋತ್ತಮನ ಪ್ರೀತಿ ಉಸಿರುಗಟ್ಟಿಸುವ ಹಂತ ತಲುಪದೇ ಹೋಗಿದ್ದರೆ ಓಡಿ ಹೋಗುತ್ತಿದ್ದೆನಾ? ಸ್ಪಷ್ಟ ಉತ್ತರ ನನ್ನಲ್ಲೇ ಇಲ್ಲ. 

Oct 17, 2020

ಒಂದು ಬೊಗಸೆ ಪ್ರೀತಿ - 84

ಬದುಕು ಬದಲಾಗಲು ತುಂಬ.... ತುಂಬ ಅಂದರೆ ತುಂಬಾ ಕಡಿಮೆ ಸಮಯ ಬೇಕು. ನಿನ್ನೆಯವರೆಗೂ ಜೊತೆಯಲ್ಲಿದ್ದವರು, ಜೊತೆಯಲ್ಲಿದ್ದು ಹರಟಿದವರು, ಹರಟಿ ಕಷ್ಟ ಸುಖಕ್ಕಾದವರು, ಕಷ್ಟ ಸುಖಕ್ಕಾಗುತ್ತಾ ಜೀವನ ಪೂರ್ತಿ ಜೊತೆಯಲ್ಲಿಯೇ ಇರುತ್ತೀವಿ ಅಂತ ನಂಬಿಕೆ ಚಿಗುರಿಸಿದವರು, ಚಿಗುರಿದ ನಂಬುಗೆಯನ್ನು ಮರವಾಗಿಸಿದವರು ಇದ್ದಕ್ಕಿದ್ದಂತೆ ದೊಡ್ಡದೊಂದು ಜೆ.ಸಿ.ಬಿ ಹೊತ್ತು ತಂದು ಮುಲಾಜೇ ಇಲ್ಲದೆ ಬೇರು ಸಮೇತ ಆ ಮರವನ್ನು ಉರುಳಿಸಿಬಿಟ್ಟರೆ ಅದನ್ನು ತಡೆದುಕೊಳ್ಳುವುದು ಮನುಷ್ಯ ಮಾತ್ರರಿಗೆ ಸಾಧ್ಯವೇ? ನಾ ತಡೆದುಕೊಂಡೆ. ಸಾಗರ ಹೇಳ್ತಾನೇ ಇರ್ತಾನಲ್ಲ ನೀ ದೇವತೆ ಅಂತ! ಇದ್ರೂ ಇರಬಹುದೇನೋ ಅಂತಂದುಕೊಂಡು ನಕ್ಕೆ. 

ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಡೈವೋರ್ಸ್ ಬಗ್ಗೆ ಯೋಚನೆ ಮಾಡಿದಾಗೆಲ್ಲ ಮದುವೆಯ ದಿನಗಳ ನೆನಪಾಗುತ್ತಿತ್ತು. ಪುರುಷೋತ್ತಮ ಎಷ್ಟೆಲ್ಲ ತೊಂದರೆ ಕೊಟ್ಟರೂ ಅದನ್ನೆಲ್ಲ ಗಮನಕ್ಕೇ ತೆಗೆದುಕೊಳ್ಳದಂತೆ ಪ್ರಬುದ್ಧರಾಗಿ ವರ್ತಿಸಿದ್ದರು ರಾಜೀವ್. ಪುರುಷೋತ್ತಮನನ್ನು ಬಿಡುವುದು ಎಷ್ಟು ಕಷ್ಟದ ಸಂಗತಿಯಾಗಿತ್ತೋ ರಾಜೀವನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಷ್ಟೇ ಸಂತಸವಾಗಿತ್ತು. ತುಂಬಾ ಸರಿಯಾದ ಆಯ್ಕೆ ಅನ್ನಿಸಿತ್ತು. ಎಲ್ಲಾ ನಿರ್ಧಾರಗಳೂ ಹಿಂಗೇ ಒಂದಷ್ಟು ವರುಷಗಳ ನಂತರ ತಪ್ಪು ಅನ್ನಿಸಲು ಶುರುವಾಗಿಬಿಡುತ್ತಾ? ಯಪ್ಪ! ಆ ತರವಾಗಿಬಿಟ್ಟರೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವುದೇ ಸಾಧ್ಯವಿಲ್ಲ. ಅವತ್ತಿಗೆ ಆ ನಿರ್ಧಾರ ಸರಿ ಇವತ್ತಿಗೆ ಈ ನಿರ್ಧಾರ ಸರಿಯಾ? ಡೈವೋರ್ಸ್ ತೆಗೆದುಕೊಳ್ಳುತ್ತಿರುವುದು ರಾಜೀವ ನನ್ನ ಮೇಲೆ ಅನುಮಾನ ಪಟ್ಟ, ಅನುಮಾನ ಪಟ್ಟು ಮನೆಯಲ್ಲಿ ಅಸಹ್ಯದ ವಾತಾವರಣ ಸೃಷ್ಟಿಸಿದ ಅನ್ನುವುದು ಮಾತ್ರ ಕಾರಣವಾ? ಕ್ಷಮೆ ಕೇಳು, ಜೊತೆಯಲ್ಲಿರಿ ಅಂತೇಳಿದ್ರಲ್ಲ ಅವರ ಮನೆಯವರು. ಯಾರೋ ದೂರದವರಲ್ಲವಲ್ಲ ರಾಜೀವು, ಒಂದು ಕ್ಷಮೆ ಬಿಸಾಕಿ ಸರಿ ಮಾಡಿಕೊಳ್ಳಬಹುದಿತ್ತಲ್ಲ. ಯಾಕೆ ಕ್ಷಮೆಯ ದಾರಿಯನ್ನು ನಾ ಆಯ್ದುಕೊಳ್ಳಲಿಲ್ಲ? ಯಾಕೆ ಆಯ್ದುಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ರಾಧ ಅಂದರೆ ತಪ್ಪಲ್ಲ. 

ಹೌದು. ರಾಜೀವ್ ದೊಡ್ಡ ಸಂಬಳದ ಕೆಲಸ ಹಿಡಿಯುವುದು ನನಗೆ ಬೇಕಿರಲಿಲ್ಲ, ನಾ ಅದನ್ನು ಯಾವತ್ತಿಗೂ ನಿರೀಕ್ಷೆಯೂ ಮಾಡಿರಲಿಲ್ಲ. ಹೋಗಲಿ ಅಪ್ಪನ ಮನೆಯಲ್ಲಿ ದಂಡಿಯಾಗಿ ದುಡ್ಡು ಬಿದ್ದಿದೆಯಲ್ಲ, ಹೋಗಿ ಈಸ್ಕೊಂಡು ಬನ್ನಿ ಅಂತ ಗೋಗರೆದಿರಲಿಲ್ಲ, ಅತ್ತು ರಂಪಾಟ ಮಾಡಿರಲಿಲ್ಲ. ಬರೋ ಸಂಬಳದಲ್ಲಿ ಆರಾಮಾಗಿ ಇರುವ ಬಿಡಿ ಅಂತ ಹೇಳುತ್ತಲೇ ಇದ್ದರೂ ಅವರಿಗೇ ವಾಸ್ತವದ ಜೀವನ ಶೈಲಿ ರುಚಿಸುತ್ತಿರಲಿಲ್ಲ. ಮತ್ತಾ ಜೀವನವನ್ನು ಸರಿಪಡಿಸುವ ಹೆಚ್ಚಿನ ಜವಾಬ್ದಾರಿ ನನ್ನ ಮೇಲೇ ಹೊರಿಸಿಬಿಟ್ಟಿದ್ದರು. ಅದನ್ನೂ ತಡೆದುಕೊಳ್ಳಬಹುದಿತ್ತು. ಆದರೆ ರಾಧಳೆಡೆಗೆ ಅವರು ತೋರುತ್ತಿದ್ದ ಅಸಡ್ಡೆ, ಅಸಡ್ಡೆ ವ್ಯಕ್ತಪಡಿಸಲು ಅವರು ಬಳಸುತ್ತಿದ್ದ ಕೀಳಾದ ಭಾಷೆ, ಆ ಕೀಳಾದ ಭಾಷೆಯನ್ನು ಶತ್ರುವಿನ ಮಕ್ಕಳಿಗೂ ಬಳಸಬಾರದು, ಬಳಸಬಾರದ ಭಾಷೆಯನ್ನು ಬಳಸಿ ಬಳಸಿ ನನ್ನಲ್ಲೂ ಅವರೆಡೆಗೊಂದು ಅಸಹ್ಯ ಮೂಡಿಸಿಬಿಟ್ಟರು. ಅವರ ಬಗ್ಗೆಯಿದ್ದ ಗೌರವ ದಿನೇ ದಿನೇ ಚೂರ್ಚೂರೇ ಕಮ್ಮಿಯಾಗಿದ್ದು ನನಗೂ ಗೊತ್ತಾಗಲಿಲ್ಲ. ರಾಮ್ ಮತ್ತು ನನ್ನ ಕಲ್ಪಿತ ಸಂಬಂಧದ ಬಗೆಗಿನ ಜಗಳ ನನ್ನೊಳ ಮನಸ್ಸಿನಲ್ಲಿದ್ದ ಡೈವೋರ್ಸ್ ತಗೊಂಡ್ ಹೋಗಿಬಿಟ್ಟರೆ ಹೇಗೆ ಅನ್ನೋ ದೂರದ ಬೆಟ್ಟವನ್ನು ಹತ್ತಿರವಾಗಿಸಿಬಿಟ್ಟಿತು. ಇದು ಹತ್ತಲಾರದ ಬೆಟ್ಟವೇನಲ್ಲ ಎಂದು ಅರಿವಾದ ಮೇಲೆ ತಿರುಗಿ ನೋಡುವ ಪ್ರಮೇಯ ಮೂಡಲಿಲ್ಲ.