Monday, January 23, 2012

ಒಂದಷ್ಟು ಆಚರಣೆಗಳ ಪೋಸ್ಟ್ ಮಾರ್ಟಮ್!


ಕೆಲವು ದಿನಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನೊಂದು ಲೇಖನ
ನೆಂಟರೊಬ್ಬರ ಮದುವೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಬಾಳೆಎಲೆ ಬಡಿಸುತ್ತಿದ್ದವನಿಗೆ ನನ್ನ ಪಕ್ಕ ಕುಳಿತಿದ್ದ ಚಿಕ್ಕಪ್ಪ ‘ಎಲೆಯ ತುದಿ ಎಡಕ್ಕೆ ಬರುವಂತೆ ಹಾಕಪ್ಪ’ ಎಂದು ಸೂಚಿಸಿದರು. ಅವನು ಅದನ್ನೇ ಪಾಲಿಸಿದ. ‘ಯಾಕೆ?’ ಪ್ರಶ್ನೆಯೆಸೆದು ಚಿಕ್ಕಪ್ಪನೆಡೆಗೆ ನೋಡಿದೆ. ‘ಎಲ್ಲಾದಕ್ಕೂ ಯಾಕೆ ಅಂತ ಕೇಳ್ತಾರಾ? ನಡೆದುಕೊಂಡು ಬಂದಿದೆ. ಸಂಪ್ರದಾಯ’ ಅವರ ಉತ್ತರ ಸಿದ್ಧವಾಗಿತ್ತು. ಉಪ್ಪು, ಕೋಸಂಬರಿ, ಬೀನಿಸ್ಸು ಪಲ್ಯ, ಮೊಸರು ಬಜ್ಜಿ ಎಲ್ಲ ಬಡಿಸಿದರು. ಎಲೆ ನೋಡಿದೆ. ಸಂಪ್ರದಾಯವೂ ಅಲ್ಲ, ಮಣ್ಣೂ ಅಲ್ಲ ಎಂದು ಎಲೆ ನೋಡುತ್ತಿದ್ದಂತೆ ತಿಳಿಯಿತು! ಹೆಚ್ಚಾಗಿ ನಾವೆಲ್ಲ ಬಲಗೈ ಉಪಯೋಗಿಸುವವರು. ಎಲೆಯ ಬಲಭಾಗ ತುದಿಯ ಭಾಗಕ್ಕಿಂತ ಅಗಲವಾಗಿರುತ್ತೆ, ತಿನ್ನಲು ಅನುಕೂಲವಾಗಲಿಕ್ಕಾಗಿ ತುದಿ ಎಡಭಾಗಕ್ಕಿರಬೇಕು ಎಂಬುದು ಸರಿಯಾದ ವಿವರಣೆ, ಮತ್ತೇನಿಲ್ಲ. ಬಹಳಷ್ಟು ಆಚರಣೆಗಳ ಹಿಂದೆ ವೈಚಾರಿಕ ಕಾರಣವಿರುತ್ತದೆಯಾದರೂ ಆ ಆಚರಣೆಗಳು ಇವತ್ತಿನ ಮಟ್ಟಿಗೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕಷ್ಟೇ.
ಬಹಳಷ್ಟು ಮದುವೆಗಳಲ್ಲಿ ಗಂಡನ್ನು ದೇವಸ್ಥಾನದ ಬಳಿ ತಯ್ಯಾರು ಮಾಡಿ ಮುಹೂರ್ತದ ಸಮಯಕ್ಕೆ ಕರೆದುಕೊಂಡು ಬರುತ್ತಾರೆ. ಹಿಂದಿನ ಕಾಲದಲ್ಲಿ ಮದುವೆಗಳು ನಡೆಯುತ್ತಿದುದೇ ಹಳ್ಳಿಗಳಲ್ಲಿ. ಆಗೇನು ವರ ಉಳಿದುಕೊಳ್ಳುವುದಕ್ಕೆ ಲಾಡ್ಜು ಮತ್ತೊಂದು ಇರಲಿಲ್ಲ. ಗೊತ್ತಿರದ ಅಪರಿಚಿತರ ಮನೆಯಲ್ಲಿ ಉಳಿಯುವ ಕಷ್ಟ ಗಂಡಿಗೆ ಬೇಡ ಎಂದು ಎಲ್ಲರೂ ಬಹುತೇಕ ನಂಬುವ ದೇವಸ್ಥಾನಕ್ಕೆ ಮೊದಲು ಬಂದು ತಯಾರು ಮಾಡಿಸಿ ಮಂಟಪಕ್ಕೆ ಕರೆದೊಯ್ಯುತ್ತಿದ್ದರು. ದೇವಸ್ಥಾನ ಊರಿನ ಹೊರಗಿರುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಗಂಡಿನ ತಲೆ ಮೇಲೊಂದು ಕೊಡೆಯಿಡಿಯುತ್ತಿದ್ದರು, ಗಂಡಿನ ಮುಖ ಬಾಡದಿರಲಿ ಎಂದು. ಕಲ್ಲು ಮುಳ್ಳಿನ ಹಾದಿಯಲ್ಲಿ ಗಂಡಿನ ಪಾದಕ್ಕೆ ಪೆಟ್ಟಾಗದಿರಲೆಂಬ ಕಾರಣದಿಂದ ಕೆಲವೆಡೆ ಊರ ಅಗಸನ ನೆರವಿನಿಂದ ಹಾದಿಯುದ್ದಕ್ಕೂ ಸೀರಯೋ ಮತ್ತೊಂದು ಬಟ್ಟೆಯನ್ನೋ ಹಾಸಿಸುತ್ತಿದ್ದರು. ಈಗ ಇವೆಲ್ಲ ಪ್ರಸ್ತುತವಾ? ರಾತ್ರಿ ರಿಸೆಪ್ಷನ್ನಿನಲ್ಲಿ ಫೋಟೋ ಮೇಲೆ ಫೋಟೋ ಹೊಡೆಸಿಕೊಂಡು ಛತ್ರದಲ್ಲೇ ಮಲಗಿದ್ದ ಗಂಡನ್ನು ಮಾರನೇ ಬೆಳಿಗ್ಗೆ ಮುಹೂರ್ತಕ್ಕೆ ಮೊದಲು ಛತ್ರದಾವರಣದಲ್ಲೇ ಇರುವ ಪುಟ್ಟ ಮಾರ್ಬಲ್ ದೇವಸ್ಥಾನಕ್ಕೆ ಒಯ್ದು ಕರೆತರುತ್ತಾರೆ. ಮೊಸಾಯಿಕ್ ನೆಲದ ಮೇಲೂ ಬಟ್ಟೆ ಹಾಸುತ್ತಾ ಸಾಗುತ್ತಾರೆ!!
ದಕ್ಷಿಣ ಕನ್ನಡದಲ್ಲಿ ನಾಗಪೂಜೆಗೆ ವಿಶೇಷ ಸ್ಥಾನ. ಸುಬ್ರಹ್ಮಣ್ಯದಲ್ಲಂತೂ ನಾಗದೋಷ ನಿವಾರಣೆಯ ಪೂಜೆ ಒಳ್ಳೆ ಬ್ಯುಸಿನೆಸ್ಸು. ದಟ್ಟ ಕಾಡುಗಳ ಮಧ್ಯೆಯೇ ಬದುಕಿದ್ದ ಜನರಿಗೆ ಹಾವಿನ ಬಗ್ಗೆ ಭಯ ಭಕ್ತಿ ಮೂಡಿದ್ದು ಸಹಜ. ಆದರೆ ಹಾವಿರಲಿ ಹೂವು ಬದುಕಲೂ ಏದುಸಿರು ಪಡುವ ಮುಂಬಯಿಯಂಥ ಶಹರುಗಳಿಂದಲೂ ನಮ್ಮ ಕ್ರಿಕೆಟ್, ಸಿನಿಮಾ, ರಾಜಕಾರಣಿಗಳು, ವಿದ್ಯಾವಂತರೂ ಬಂದು ಸರ್ಪ ಸಂಸ್ಕಾರ ಮಾಡಿಸುವುದು ಮೂಢನಂಬಿಕೆಯಲ್ಲದೆ ಮತ್ತೇನು?
ಏಪ್ರಿಲ್ ಮೇ ತಿಂಗಳುಗಳಲ್ಲಿ ಸೂರ್ಯನ ತೆಕ್ಕೆಯಲ್ಲೇ ವಿರಮಿಸುವ ಗುಲ್ಬರ್ಗ ರಾಯಚೂರಿನಂಥ ಊರುಗಳಲ್ಲಿ ಮಹಿಳೆಯರನೇಕರು ಅಡಿಯಿಂದ ಮುಡಿಯವರೆಗೆ ಬಟ್ಟೆ ಸುತ್ತಿಕೊಂಡಿರುತ್ತಾರೆ; ಗಂಡಸರೂ ಇದಕ್ಕೆ ಹೊರತಲ್ಲ. ಬಿಸಿಗಾಳಿಯಿಂದ ರಕ್ಷಣೆ ಪಡೆಯುವದಷ್ಟೇ ಇದರ ಹಿಂದಿನ ಉದ್ದೇಶ. ಬಿಸಿಲು ಹೆಚ್ಚಿರುವ ಅರಬ್ ರಾಷ್ಟ್ರಗಳಲ್ಲಿ ಇಸ್ಲಾಂ ಬೆಳೆದು ಪ್ರಜ್ವಲಿಸಿದ ಕಾರಣ ಆರೋಗ್ಯ ರಕ್ಷಣೆಗಾಗಿ ಧರಿಸುತ್ತಿದ್ದ ಬುರ್ಖಾ ಕ್ರಮೇಣ ಧರ್ಮದ ಅಂಗವಾಗಿಬಿಟ್ಟಿರಬೇಕು. ‘ಮುಸ್ಲಿಂ ಮಹಿಳೆಯರು ಎ ಸಿ ಯೊಳಗೆ ಕುಂತರೂ ಬುರ್ಖಾ ಧರಿಸಲೇಬೇಕು’ ಎಂದಬ್ಬರಿಸುವ ಜನರ ಮನಸ್ಸು ವೈಚಾರಿಕತೆಗೆ ತೆರೆದುಕೊಳ್ಳದೆ ಮೂಢವಾಗಿದೆಯಷ್ಟೇ?
ಎಲ್ಲ ಆಚರಣೆಗಳಿಗೂ ಒಂದು ಹಿನ್ನೆಲೆ ಕಾರಣ ಇದ್ದೇ ಇರುತ್ತದೆ. ಅವುಗಳಲ್ಲಿ ಬಹಳಷ್ಟು ಹಿಂದಿನ ಕಾಲದ ಜನರ ತಿಳುವಳಿಕೆಯ ಮಟ್ಟಕ್ಕೆ ಅಂದಿನ ಅವಶ್ಯಕತೆಗಳಿಗೆ, ದಬ್ಬಾಳಿಕೆ, ಶೋಷಣೆಗೆ ಸರಿಯಾಗಿದ್ದವೇನೋ. ವೈಚಾರಿಕ ತರ್ಕಕ್ಕೆ ಒಳಪಡಿಸಿದ ನಂತರವೂ ಒಂದು ಆಚರಣೆ ಇಂದಿಗೂ ಪ್ರಸ್ತುತ ಉಪಯೋಗಕರ ಎಂದು ಖಚಿತವಾದರೆ ಖಂಡಿತ ಪಾಲಿಸೋಣ. ಆದರೆ ಸಂಪ್ರದಾಯದ ಹೆಸರಿನಲ್ಲಿ ಎಲ್ಲವನ್ನೂ ಪಾಲಿಸಿ ಮೂಢರಾಗುವುದು ಬೇಡ.
“ಅಲ್ಲ ಕಣ್ಲಾ. ನಾವೇನೋ ನಮ್ಮ ತಲೆ ಉಪಯೋಗಿಸಿ ಅವತ್ತಿಗೆ ನಮಗೆ ಸರಿ ತೋಚಿದಂಗೆ ಮಾಡ್ತಿದ್ದೋ. ಇವರಿಗೇನ್ಲಾ ಬಂದಿರೋದು ದೊಡ್ ರೋಗ. ನಮ್ ಹಿರೀಕರ ತಲೇನೇ ನಾವು ಉಪಯೋಗಿಸ್ತೀವಿ, ನಮ್ ತಲೇನ ಸೈಡಿಗಿಡ್ತೀವಿ ಅಂತಾವಲ್ಲ ಮುಂಡೇವು!” ಎಂದು ನಮ್ಮ ಹಿರೀಕರು ಇಷ್ಟಗಲ ಬಾಯಿ ತೆರೆದು ನಮ್ಮನ್ನು ನೋಡಿ ನಗಬಾರದಲ್ಲವೇ?
-      ಡಾ ಅಶೋಕ್. ಕೆ. ಆರ್

Thursday, January 19, 2012

ಪಬ್ಲಿಕ್ ಟಿ.ವಿ ಪಬ್ಲಿಕ್ಕಿಗಾಗಿಯೇ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತಾ . . .


ಹತ್ತರ ನಂತರ ಹನ್ನೊಂದಾಗುವುದಿಲ್ಲ ಎಂಬ ಭರವಸೆಯೊಂದಿಗೆ ಇದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕನ್ನಡಕ್ಕೆ ಮತ್ತೊಂದು ಸುದ್ದಿವಾಹಿನಿಯ ರಂಗಪ್ರವೇಶವಾಗುತ್ತಿದೆ. ಪಬ್ಲಿಕ್ ಟಿ.ವಿ ಎಂಬ ಹೆಸರಿನಲ್ಲಿ. ಕನ್ನಡಪ್ರಭದಲ್ಲಿ ಕೆಲಸದಲ್ಲಿದ್ದ ನಂತರ ಕೆಲಕಾಲ ಸುವರ್ಣವಾಹಿನಿಯನ್ನು ಮುನ್ನಡೆಸಿದ ರಂಗನಾಥ್ ಪಬ್ಲಿಕ್ ಟಿ.ವಿಯ ಕ್ಯಾಪ್ಟನ್. ಸುವರ್ಣಸುದ್ದಿವಾಹಿನಿಗೆ ಹೋಗುವಾಗ ತಮ್ಮೊಡನೆ ಕನ್ನಡಪ್ರಭದ ವಿಶ್ವಾಸಾರ್ಹ ಪ್ರತಿಭಾವಂತ ಪತ್ರಕರ್ತರನ್ನು ಕರೆದೊಯ್ದ ರಂಗನಾಥ್ ಅದೇ ಪತ್ರಕರ್ತರನ್ನು ಹೊಸ ವಾಹಿನಿಯ ಬೆನ್ನೆಲುಬಾಗಿ ನಿಲ್ಲಿಸಿಕೊಂಡಿದ್ದಾರೆ. ಯಶ ಪಡೆಯುತ್ತಾರಾ? ನಿರ್ಧರಿಸಲು ಹೆಚ್ಚು ಸಮಯ ಕಾಯಬೇಕಿಲ್ಲ.

ಹಣ ಯಾರದು?
ರಿಲಯನ್ಸ್ ಸಂಸ್ಥೆ ನೆಟ್ ವರ್ಕ್ 18ರ ಮುಖಾಂತರ ದೇಶದ ಪ್ರಮುಖ ವಾಹಿನಿಗಳು, ಕೆಲವು ಪ್ರಾದೇಶಿಕ ಭಾಷಾ ವಾಹಿನಿಗಳ ಮೇಲೆ ಪ್ರಭುತ್ವ ಸ್ಥಾಪಿಸಲು ಹೊರಟಿದೆ. ಇನ್ನು ಕನ್ನಡದ ಸುದ್ದಿವಾಹಿನಿಗಳ ಕಡೆ ನೋಡಿದರೆ ಬಹುತೇಕ ಸಂಸ್ಥೆಗಳು ರಾಜಕಾರಣಿಗಳ ಜಾಗೀರಾಗಿದೆ! ಜಾರಕಿಹೊರಳಿ ಕುಟುಂಬದ ಸಮಯ ಈಗ ನಿರಾಣಿಯವರದು, ಕಸ್ತೂರಿ ನ್ಯೂಸ್ ದೇವೇಗೌಡ ಕುಟುಂಬದ ಆಸ್ತಿ, ವಿಶ್ವೇಶ್ವರ ಭಟ್ಟರ ನೇತೃತ್ವದ ಸುವರ್ಣ ಬಿಜೆಪಿಯ ರಾಜೀವ್ ಚಂದ್ರಶೇಖರ್ ರದು, ಜನಶ್ರೀ ಹೆಸರೇ ಸೂಚಿಸುವಂತೆ ಬಿ.ಎಸ್.ಆರ್ ಪಕ್ಷದ್ದು. ಉದಯ ವಾರ್ತೆ ಡಿ.ಎಂ.ಕೆ ಕುಟುಂಬದ್ದು, ಟಿವಿ 9 ಕನ್ನಡ ಯಾವ ರಾಜಕೀಯ ಪಕ್ಷದವರದೂ ಅಲ್ಲವಾದರೂ ಅದು ಧನಪಕ್ಷದ ವಾಹಿನಿ ಎಂಬುದು ಸತ್ಯವೋ ಜೋಕೋ ತಿಳಿಯುವುದು ಕಷ್ಟ ಕಷ್ಟ.
ಪಬ್ಲಿಕ್ ಟಿ.ವಿ.ಗೆ ಹಣ ಹೂಡಿರುವವರಾರು? ಒಂದು ಮೂಲದ ಪ್ರಕಾರ ಲಹರಿ ವೇಲು ಹಣ ಹೂಡಿದ್ದಾರೆ. ಸಮಾನಮನಸ್ಕರು, ನಿಜವಾದ ಪತ್ರಿಕೋದ್ಯಮದಲ್ಲಿ ಆಸಕ್ತಿಯಿರುವವರು ಹಣ ಹೂಡಿದ್ದಾರೆ ಎಂಬುದು ಪಬ್ಲಿಕ್ ಟಿ.ವಿ ಪತ್ರಕರ್ತರ ಆಂಬೋಣ. ಉಳಿದ ವಾಹಿನಿಗಳಿಗಿಂತ ಭಿನ್ನವಾಗಿಸುವ ಪ್ರಯತ್ನಕ್ಕೆ ಪೂರಕವೆಂಬಂತೆ ಮೊದಲ ದಿನದ ಕಾರ್ಯಕ್ರಮಗಳಿರುತ್ತವಂತೆ. ವಾಹಿನಿಯಲ್ಲಿ ಕೆಲಸ ಮಾಡುವ ಎಲ್ಲ ವರದಿಗಾರರ ಆಸ್ತಿ ವಿವರಗಳನ್ನು ಮೊದಲ ದಿನ ಪ್ರಕಟಿಸುತ್ತಾರೆಂಬ ಮಾಹಿತಿಯಿದೆ. ಭ್ರಷ್ಟರ ರೀತಿ ರಾಮನ ಲೆಕ್ಕ ಕೃಷ್ಣನ ಲೆಕ್ಕ ಕೊಡದಿದ್ದರೆ ಸಾರ್ಥಕ! ಇದರೊಟ್ಟಿಗೆ ಹಣ ಹೂಡಿದವರ ವಿವರಗಳನ್ನೂ ಮೊದಲ ದಿನ ಪ್ರಸ್ತುತಪಡಿಸಿದರೆ ಮತ್ತಷ್ಟು ವಿಶ್ವಾಸಾರ್ಹವಾದೀತು.
ನಿಜಕ್ಕೂ ಹೊಸತನ್ನು ಕೊಡಬಲ್ಲರೇ?
ಪ್ರಾದೇಶಿಕ ಸುದ್ದಿವಾಹಿನಿಗಳಿರಲಿ ಅಥವಾ ರಾಷ್ಟ್ರೀಯ (?) ಮಟ್ಟದ ವಾಹಿನಿಗಳಿರಲಿ ಎಲ್ಲವೂ ಒಂದು ಮತ್ತೊಂದರ ತದ್ರೂಪಿನಂತೆಯೇ ಕಾಣುತ್ತಿರುವಾಗ ‘ಹೊಸತನ್ನು ಖಂಡಿತ ನೀಡಲಿದ್ದೇವೆ’ ಎಂಬುದನ್ನು ನಂಬುವುದೇ ಕಷ್ಟವಾಗಿದೆ. ಕನ್ನಡದ ಮಟ್ಟಿಗೆ ಉದಯ ವಾರ್ತೆಗಳು ಮೊದಲ ಸುದ್ದಿವಾಹಿನಿಯಾದರೂ ತನ್ನ ನಿಧಾನಗತಿಯಿಂದ, ಹಳೆಯ ಸುದ್ದಿಗಳ ಪುನರಾವರ್ತನೆಯಿಂದ ಅದು ಹೆಚ್ಚು ಸದ್ದು ಮಾಡಲಿಲ್ಲ. ಟಿ.ವಿ9 ಕನ್ನಡ ವಾಹಿನಿಯೇ ಕನ್ನಡದ ಮೊದಲ ಸಂಪೂರ್ಣ ಸುದ್ದಿವಾಹಿನಿ ಎಂದರೆ ಸರಿಹೋದೀತು. ಮೊದಮೊದಲು ವಸ್ತುನಿಷ್ಠ ವರದಿಗಳಿಂದ, ನಡೆಸಿದ ಕುಟುಕು ಕಾರ್ಯಾಚರಣೆಗಳಿಂದ ಜನರನ್ನಾಕರ್ಷಿಸಿದ ಟಿ.ವಿ9 ನಂತರ ರೋಚಕ (?) ಸಂಗತಿಗಳಿಗೆ ಮಹತ್ವ ನೀಡಲಾರಂಭಿಸಿತು. ನಂತರ ಬಂದ ಸುವರ್ಣ, ಸಮಯ, ಜನಶ್ರೀ, ಕಸ್ತೂರಿ ಎಲ್ಲವೂ ಟಿ.ವಿ9 ವಾಹಿನಿಯ ತದ್ರೂಪಿನಂತಯೇ ಕಾರ್ಯಕ್ರಮಗಳನ್ನು ಆರಂಭಿಸಿತು. ಅದೇ ಕ್ರಿಕೆಟ್ಟೂ, ಸಿನಿಮಾ, ತಾರೆಯರ ಜೀವನದ, ಪ್ರಚಾರಪ್ರಿಯ ರಾಜಕಾರಣಿಗಳ ವೈಭವೀಕರಣ, ರಾತ್ರಿ ಮಲಗೋಕೆ ಮುಂಚೆ ಒಂದಷ್ಟು ಕ್ರೈಮು, ವಾರಕ್ಕೊಮ್ಮೆ ಹೀಗೂ ಉಂಟೆ?! ಎಲ್ಲಾ ವಾಹಿನಿಗಳಲ್ಲೂ ಒಂದೇ ರೀತಿಯ ಕಾರ್ಯಕ್ರಮಗಳು. ಹೆಸರು ಬೇರೆಬೇರೆಯಷ್ಟೇ. ಈಗ ಹೊಸದಾಗಿ ಎಲ್ಲಾ ವಾಹಿನಿಗಳಲ್ಲೂ ರೆಕಾರ್ಡೆಡ್ ಹಾಸ್ಯ ಕಾರ್ಯಕ್ರಮಗಳ ಕಾರುಬಾರು.
‘ಜನರಿಗೆ ಏನು ಬೇಕೋ ಅದನ್ನೇ ನೀಡುತ್ತಿದ್ದೇವೆ’ ಎಂಬ ಸಮರ್ಥನೆಯೊಂದಿಗೆ ನೈಜ ನೈತಿಕ ಪತ್ರಿಕೋದ್ಯಮಕ್ಕೆ ತಿಲಾಂಜಲಿಯಿಟ್ಟು ಕಾರ್ಯನಿರ್ವಹಿಸುತ್ತಿರುವ ವಾಹಿನಿಗಳು ರಾಜಕಾರಣಿಗಳ, ರಾಜಕೀಯ ಪಕ್ಷಗಳ ಮುಖವಾಣಿಯಂತೆ ಕೆಲಸಮಾಡುತ್ತಿರುವುದು ಸುಳ್ಳಲ್ಲ. ಇವರ ನಡುವೆ ಸುದ್ದಿ ಮಾಧ್ಯಮಕ್ಕೆ ಹೊಸ ಆಯಾಮ ನೀಡುತ್ತೇವೆಂಬ ಆಶ್ವಾಸನೆಯೊಂದಿಗೆ ಬರುತ್ತಿರುವ ಪಬ್ಲಿಕ್ ಟಿ.ವಿಯ ಬಗ್ಗೆ ಎಷ್ಟರ ಮಟ್ಟಿಗೆ ಭರವಸೆ ಇಡಬಹುದು? ಟಿ.ಆರ್.ಪಿ ಯುದ್ಧದಲ್ಲಿ ಪಬ್ಲಿಕ್ ಟಿ.ವಿ ಕೂಡ ಮತ್ತೊಂದು ಮಗದೊಂದು ವಾಹಿನಿಯಷ್ಟೇ ಆಗಿಬಿಡಬಹುದೇ? ಜಾಹೀರಾತುಗಳ ಮೇಲಿನ ಅವಲಂಬನೆಯನ್ನು ಯಾವುದೇ ಸುದ್ದಿ ವಾಹಿನಿ ತೊರೆಯುವುದು ಅಸಾಧ್ಯ. ಜಾಹೀರಾತು ನೀಡುವ ಉದ್ದಿಮೆಗಳು, ಆ ಉದ್ಯಮಗಳ ಹಿಂದಿನ ರಾಜಕಾರಣಿಗಳು ಇವರೆಲ್ಲರ ವಿಷವರ್ತುಲದಲ್ಲಿ ನಿಜಕ್ಕೂ ಪತ್ರಿಕೋದ್ಯಮಕ್ಕೆ ನ್ಯಾಯ ಸಲ್ಲಿಸುತ್ತಾರಾ? ನ್ಯಾಯ ಸಲ್ಲಿಸಲಿ ಎಂಬುದು ನಮ್ಮ ಆಸೆ, ಹಾರೈಕೆ.
ಉಳಿದಿದ್ದೇನೆ ಇರಲಿ, ಸದ್ಯದ ಮಟ್ಟಿಗಂತೂ ಪತ್ರಕರ್ತರ ವಲಯದಲ್ಲಿ ಪಬ್ಲಿಕ್ ಟಿ.ವಿ ಸಂಚಲನವನ್ನುಂಟುಮಾಡಿದೆ. ವಾಹಿನಿ ಹುಟ್ಟುವ ಮೊದಲೇ ಅದನ್ನು ಮುಗಿಸಲು ಹೊಂಚುಹಾಕುವ ಪತ್ರಕರ್ತರ ಸಂಖ್ಯೆ ಹೆಚ್ಚಿದೆ. ಅಷ್ಟರಮಟ್ಟಿಗೆ ರಂಗನಾಥ್ ಮತ್ತವರ ತಂಡ ಗೆದ್ದಿದೆ. ಈ ಗೆಲುವು ನಿರಂತರವಾಗಿ ಮುಂದುವರೆಯಲಿ......
ಡಾ. ಅಶೋಕ್. ಕೆ. ಆರ್.
19/01/2012

Thursday, January 5, 2012

ಹಿಂಗೇ ಸುಮ್ಮನೆ...


Tuesday, January 3, 2012

ಒಂದು ಗಲಭೆಯ ಸುತ್ತ. . .

ಕಳೆದ ವಾರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಕಥೆ.

ಒಂದು ಬೆಳಿಗ್ಗೆ ಬಸ್ಸಿನಲ್ಲಿ: - “ಏ ರಫೀಕ್. ಬಾ ಇಲ್ಲಿ. ಇಲ್ಲೇ ಸೀಟು ಖಾಲಿ ಇದೆ”. ರಫೀಕ್ ಅವಳೆಡೆಗೆ ನೋಡಿದ. ಹಿಂದಿರುಗಿ ತನ್ನ ಗೆಳೆಯರಾದ ಗಣೇಶ, ರಾಜು, ರಷೀದ್ ಕುಳಿತಿದ್ದೆಡೆಗೆ ನೋಡಿದ. ಮುಸಿಮುಸಿ ನಗಲಾರಂಭಿಸಿದ್ದರು. “ಏನ್ ಯೋಚಿಸುತ್ತಿದ್ದೀಯೋ? ಬಾ ಬೇಗ ಏನೋ ಕೊಡಬೇಕು” ಅವಳು ಮತ್ತೆ ಕೂಗಿದಳು. ನಿಂತಲ್ಲಿಂದ ಒಂದಿಂಚೂ ಅತ್ತಿತ್ತ ಕದಲದೆ ಅವಳೆಡೆಗೆ ನೋಡುತ್ತಾ “ಇಲ್ಲ ರಶ್ಮಿ ದೀದಿ. ನಾನಿಲ್ಲೇ ಎಲ್ಲಾದರೂ ಕೂತ್ಕೋತೀನಿ” ಎಂದ್ಹೇಳಿ ತಲೆತಗ್ಗಿಸಿದ. “ಯಾಕೋ? ಏನಾಯ್ತು? ಅಮ್ಮ ನಿನಗೂ ತಿಂಡಿ ಕೊಟ್ಟು ಕಳುಹಿಸಿದ್ದಾರೆ. ಬಾ”. ತಗ್ಗಿಸಿದ ತಲೆಯನ್ನು ಮೇಲೆತ್ತದೆ “ಇಲ್ಲ ದೀದಿ. ನಾನಲ್ಲಿ ಬಂದು ಕೂತರೆ ಇವರೆಲ್ಲ ರೇಗಿಸ್ತಾರೆ. ಹೆಣ್ಮುಕ್ಕ ಹೆಣ್ಮುಕ್ಕ ಅಂತಾರೆ. ಆಮೇಲೆ ತಗೋತೀನಿ ಬಿಡು”. ರಶ್ಮಿ ಮತ್ತವಳ ಪಕ್ಕದಲ್ಲಿ ಕುಳಿತಿದ್ದ ಅವಳ ಗೆಳತಿ ಜೋರು ದನಿಯಲ್ಲಿ ನಕ್ಕರು. “ಈಗ ಎಂಟನೇ ತರಗತಿಗೆ ಬಂದಿದ್ದೀರ. ದೊಡ್ಡ ಗಂಡಸಂಗೆ ಆಡ್ತೀರಲ್ಲ. ಬಾರೋ ಇಲ್ಲಿ. ಅದ್ಯಾವನು ರೇಗಿಸ್ತಾನೋ ನಾನೂ ನೋಡ್ತೀನಿ” ಎಂದು ಜೋರು ಮಾಡಿದಳು. ರಫೀಕ ಮತ್ತೆ ತನ್ನ ಗೆಳೆಯರೆಡೆಗೆ ನೋಡಿದ. ನಗು ಕಡಿಮೆಯಾಗಿತ್ತು, ಮಾಯವಾಗಿರಲಿಲ್ಲ. ‘ದಯವಿಟ್ಟು ರೇಗಿಸಬೇಡ್ರೋ’ ಎಂದು ಕಣ್ಣಿನಲ್ಲೇ ಬೇಡುತ್ತ ರಶ್ಮಿಯ ಪಕ್ಕ ಬಂದು ಕುಳಿತ. “ಇನ್ನು ಸರಿಯಾಗಿ ಮೀಸೆ ಮೂಡಿಲ್ಲ ನಿನ್ನ ಫ್ರೆಂಡ್ಸಿಗೆ, ಪಿಯುಸಿ ಓದ್ತಿರೋ ನನ್ನನ್ನೂ ರೇಗಿಸ್ತಾರಂತ?!” ಅವಳ ಪ್ರಶ್ನೆಗೆ ಉತ್ತರವೀಯದೆ ಆಕೆಯಿತ್ತ ತಿಂಡಿಯನ್ನು ತಿನ್ನತೊಡಗಿದ. ಬಸ್ಸು ಹೊರಟಿತು.
ಅದೇ ಸಂಜೆ ಅದೇ ಬಸ್ಸು: -
“ಲೋ. ಕಿಟಕಿ ಪಕ್ಕ ಬ್ಯಾಗ್ ಇಟ್ಟಿದ್ದೆ. ರೀಸಸ್ಸಿಗೆ ಹೋಗಿ ಬರೋಷ್ಟರಲ್ಲಿ ಕೂತುಬಿಟ್ಟಿದ್ದೀರಲ್ಲ. ನನ್ನ ಜಾಗ ಬಿಡ್ರೋ” ಗೋಗರೆದ ರಫೀಕ. ಅವನ ಬ್ಯಾಗನ್ನು ಅವನಿಗೆ ಹಿಂದಿರುಗಿಸುತ್ತ “ಏನ್ ಸೀಟ್ ರಿಸರ್ವ್ ಮಾಡ್ಸಿದ್ಯಾ? ಹೋಗ್ ಹೋಗು. ಬೇರೆಯಲ್ಲಾದರೂ ಕೂತ್ಕೋ ಹೋಗು” ರಷೀದ್ ಇಷ್ಟು ಹೇಳಿ ಗಣೇಶನೆಡೆಗೆ ನೋಡಿ ಕಣ್ಣುಮಿಟುಕಿಸಿದ. ಗಣೇಶ ಚುಡಾಯಿಸುವ ದನಿಯಲ್ಲಿ “ಹೋಗಪ್ಪ. ನಿನ್ನ ರಶ್ಮಿ ದೀದಿ ಎಲ್ಲಾದರೂ ಸೀಟು ಹಿಡಿದಿರುತ್ತಾಳೆ” ಎಂದು ಹೇಳುತ್ತಿದ್ದಂತೆ ರಫೀಕನಿಗೆ ಕೋಪವೇರಿ ಗಣೇಶನ ಕೊರಳಪಟ್ಟಿ ಹಿಡಿದೆಳೆದ, ಶರ್ಟಿನ ಮೊದಲ ಗುಂಡಿ ಕಿತ್ತು ಬಂತು. “ನಮ್ಮ ಜೊತೇನೇ ಪಂಗಾ ತಗೊತೀಯೇನೋ” ಎಂದಬ್ಬರಿಸುತ್ತ ಗಣೇಶನ ಅಕ್ಕಪಕ್ಕ ಕುಳಿತಿದ್ದ ರಾಜು ರಷೀದ ಮೇಲೆದ್ದು ಮೂವರು ರಫೀಕನ ಎದೆ ಮೇಲೆ ಕೈಹಾಕಿ ರಭಸದಿಂದ ನೂಕಿದರು. ನಾಲ್ಕೆಜ್ಜೆ ಹಿಂದೆ ಹೋದವನು ಆಯತಪ್ಪಿ ಬೀಳುವಷ್ಟರಲ್ಲಿ ಕಂಡಕ್ಟರ್ ಅವನನ್ನು ಹಿಡಿದು ಮೇಲೆತ್ತಿದ. “ಲೋ ನಿಮಗೆಲ್ಲ ತಿಂದಿದ್ದು ಹೆಚ್ಚಾಯ್ತ? ನನ್ನ ಬಸ್ಸಲ್ಲೇ ಕಿತ್ತಾಡ್ತೀರಾ? ಎಲ್ಲರನ್ನೂ ಹೊರಗೆ ಅಟ್ಟಿಬಿಡ್ತೀನಿ ನೋಡಿ” ಎಂದು ಗದರಿಸಿ ಅಲ್ಲೇ ಇದ್ದ ಒಂದು ಖಾಲಿ ಸೀಟಿನಲ್ಲಿ ರಫೀಕನಿಗೆ ಕೂರುವಂತೆ ಸೂಚಿಸಿ ರಾಜುವಿನೆಡೆಗೆ ತಿರುಗಿ “ಯಾಕೋ ರಾಜು ಈ ಪುಂಡಪಟಲಾಮ್ಮಿನ ಜೊತೆ ಸೇರಿ ನೀನೂ ಹಾಳಾಗ್ ಬೇಕು ಅಂತಿದ್ದೀಯಾ ಹೇಗೆ? ನಿಮ್ಮಪ್ಪನಿಗೆ ಹೇಳ್ಬೇಕಾ?” ಎಂದು ಕೇಳಿದ. “ಹೇ ಹೇ. ಸುಮ್ಮನೆ ತಮಾಷೆಗೆ ಆಟಾಡ್ತಿದ್ದೋ ಅಂಕಲ್. ಮನೇಗೆಲ್ಲ ಹೇಳ್ಬೇಡಿ” ಹಲ್ಲುಕಿರಿಯುತ್ತ ಹೇಳಿ ಸುಮ್ಮನಾದ.
ಅದೇ ರಾತ್ರಿ ಎರಡು ಅಂಗಡಿಗಳ ಬಳಿ: -
            “ವಿಷಯ ಗೊತ್ತಾಯ್ತ ರಮೇಶ. ಇವತ್ತು ಸಂಜೆ ಬಸ್ಸಿನಲ್ಲಿ ಒಬ್ಬ ಸಾಬಿ ಹುಡುಗ ನಮ್ಮ ಇಬ್ಬರ ಹುಡುಗರಿಗೆ ಶರ್ಟೆಲ್ಲ ಹರಿದು ರಕ್ತ ಸುರಿಯುವಂತೆ ಹೊಡೆದನಂತೆ”
            “ಹೌದಾ?! ಇವರದ್ಯಾಕೋ ಅತಿಯಾಯ್ತು ನೋಡು. ಏನಕ್ಕಂತೆ?”
            “ಲವ್ ಜಿಹಾದೂ. ಆ ಸಾಬೇ ನಮ್ಮ ಹುಡುಗಿಯೊಬ್ಬಳ ಬಳಿಯೇ ಕುಳಿತುಕೊಳ್ಳುತ್ತಿದ್ದನಂತೆ. ಇವರು ಯಾಕೆ ಅಂಥ ಕೇಳಿದ್ದಾರೆ. ಅಷ್ಟಕ್ಕೇ. . .”
            “ಒಂದು ಮೀಟಿಂಗ್ ಸೇರಿಸು. ಏನಾದ್ರೂ ಮಾಡಬೇಕು ಇದರ ಬಗ್ಗೆ”
* * *
            “ವಿಷಯ ಗೊತ್ತಾಯ್ತ ಹಮೀದ್ ಭಾಯ್?”
            “ಏನು ಅಲಿ?”
            “ಇವತ್ತು ಸಂಜೆ ಬಸ್ಸಿನಲ್ಲಿ ನಮ್ಮ ಹುಡುಗನೊಬ್ಬನಿಗೆ ಇಬ್ಬರು ಹಿಂದೂ ಹುಡುಗರು ರಕ್ತ ಕಾರುವಂತೆ ಹೊಡೆದರಂತೆ”
            “ಹೌದಾ?! ಇವರದ್ಯಾಕೋ ಅತಿಯಾಯ್ತು ನೋಡು. ಒಂದು ಮೀಟಿಂಗ್ ಸೇರಿಸು. ಏನಾದ್ರೂ ಮಾಡಬೇಕು ಇದರ ಬಗ್ಗೆ”
* * *
ಮತ್ತೊಂದು
ಹೈವೇಯಲ್ಲಿನ ಒಂದು ಹೋಟೆಲಿನಲ್ಲಿ: -
“ನಿಮ್ಮನ್ನು ಅಲ್ಲಿ ನೋಡಿದ್ದೀನಿ. ಅಲ್ಲೇ ಇದ್ರಲ್ವಾ ನೀವಿಬ್ಬರೂ” ಕಾಫಿ ಹೀರುತ್ತ ಕುಳಿತಿದ್ದ ಪ್ರಭಾ ಮತ್ತು ಉಮಾರ ಬಳಿ ಬಂದು ಖಾಲಿಯಿದ್ದ ಅವರೆದುರಿಗಿನ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಕೇಳಿದ ಅನ್ಸಾರಿ. ಅವನೊಟ್ಟಿಗೆ ಬಂದ ನದೀಮ ಅವನ ಪಕ್ಕದಲ್ಲಿ ಆಸೀನನಾದ.
“ಹೌದು. ಅಲ್ಲೇ ಇದ್ವಿ. ಒಂದು ವಾರವಾಯ್ತು ಬಂದು. ನಿಮ್ಮನ್ನೂ ನೋಡಿದ್ದೀನಿ”
“ನಾವೂ ಹೊರಗೆ ಬಂದು ಒಂದು ವಾರವಾಯ್ತಷ್ಟೇ!”
“ಯಾವ ಕೇಸು?”
“ಅದೂ ಅದೂ. .  .”
“ಪರವಾಗಿಲ್ಲ ಹೇಳಿ”
“ಖೋಟಾನೋಟು! ನಿಮ್ಮದು?”
“ಖೋಟಾನೋಟಾ?! ನಮ್ಮದು ಅಷ್ಟೆಲ್ಲ ದೊಡ್ಡ ಕೇಸಲ್ಲಪ್ಪ. ಚಿಕ್ಕ ಪುಟ್ಟ ಒಡವೆ ಕದಿಯಬೇಕಾದರೆ ಸಿಕ್ಕಿಹಾಕಿಕೊಂಡಿದ್ದೆವು ಅಷ್ಟೇ!”. ಅದೂ ಇದೂ ಹರಟುತ್ತಾ ಹದಿನೈದು ನಿಮಿಷ ಕಳೆದರು. ನದೀಮ ಅನ್ಸಾರಿಯ ಕಿವಿಯಲ್ಲೇನೋ ಉಸುರಿದ. ಅನ್ಸಾರಿ ಸರಿಯೆಂಬಂತೆ ತಲೆಯಾಡಿಸುತ್ತ “ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ ನಮ್ಮ ಜೊತೆ ಬನ್ನಿ. ಮೈಸೂರಿಗೆ ಹೋಗೋಣ. ಒಂದು ಚಿಕ್ಕ ಬ್ಯುಸಿನೆಸ್ಸು. ನಿಮಗೂ ಕಮಿಷನ್ ಸಿಗುತ್ತೆ. ಜೊತೆಯಲ್ಲಿಬ್ಬರು ಹುಡುಗೀರಿದ್ರೆ ಅನುಮಾನ ಪಡೋರು ಕಡಿಮೆ”. ಪ್ರಭಾ, ಉಮಾ ತಮ್ಮತಮ್ಮಲ್ಲೇ ಚರ್ಚಿಸಿ ಐದು ನಿಮಿಷದ ನಂತರ ಕಾಫಿಯ ದುಡ್ಡು ಕೊಟ್ಟು ನದೀಮ ತಂದಿದ್ದ ಕಾರಿನಲ್ಲಿ ಮೈಸೂರಿನ ಕಡೆಗೆ ಹೊರಟರು. ಅದೇ ಸಮಯಕ್ಕೆ ಹೋಟೆಲಿನ ಫೋನ್ ರಿಂಗಣಿಸಿತು.
“ಹಲೋ”
“ಹಲೋ ನಾನು ರಮೇಶ”
“ರಮೇಶಣ್ಣ!! ನಾನೇ ಈಗ ನಿಮಗೆ ಫೋನ್ ಮಾಡುವವನಿದ್ದೆ ನೋಡಿ. ಒಂದು ಮುಖ್ಯವಾದ ವಿಷಯ. ಈಗ ಅರ್ಧ ಘಂಟೆಗೆ ಮೊದಲು ನಮ್ಮ ಇಬ್ಬರು ಹುಡುಗೀರು ಬಂದು ಕಾಫಿ ಕುಡಿಯುತ್ತಿದ್ದರು. ಅವರು ಬಂದ ಐದು ನಿಮಿಷಕ್ಕೆ ಅವರು ಇಬ್ಬರು ಬಂದರು. ಬೇರೆ ಬೇರೇನೆ ಕುಳಿತಿದ್ದರು. ಅವರಿಬ್ಬರೂ ನಂತರ ನಮ್ಮವರ ಬಳಿಗೆ ಬಂದು ಏನೋ ಗುಸುಗುಸು ಮಾತನಾಡಿ ತಮ್ಮ ಜೊತೇಲೇ ಕರೆದುಕೊಂಡುಹೋಗಿಬಿಡೋದಾ?!! ನಾನಿವತ್ತು ಒಬ್ಬನೇ ಬೇರೆ ಇದ್ದೆ. ಇಲ್ಲಾಂದ್ರೆ ಇಲ್ಲೇ ಹಿಡಿದುಹಾಕಿಬಿಡ್ತಿದ್ದೆ”
“ಇರಲಿ ಇರಲಿ. ಯಾವ ಕಡೆ ಹೊರಟರು?”
“ಮೈಸೂರಿನ ಕಡೆಗೆ. ಇನ್ನರ್ಧ ಘಂಟೇಲಿ ನಿಮ್ಮ ಊರಿನ ಬಳಿ ಬರ್ತಾರೆ”
“ಯಾವ ಗಾಡಿ?”
“ಮಾರುತಿ ಆಮ್ನಿ, ಬಿಳಿ ಬಣ್ಣದ ಗಾಡಿ. ಕೇರಳ ರಿಜಿಷ್ಟ್ರೇಶನ್ದು”
“ನಾವು ವಿಚಾರಿಸ್ತೀವಿ ಬಿಡು. ನಿನಗೆ ನಂತರ ಫೋನ್ ಮಾಡ್ತೀನಿ. ನಾಳೆ ಮೀಟಿಂಗಿದೆ”
ಅದೇ ರಾತ್ರಿ ಪೋಲೀಸ್ ಠಾಣೆಯಲ್ಲಿ: -
ಒಳಗೇನು ನಡೀತು, ಹೊರಗೇನು ನಡೀತು ಅನ್ನೋದು ಸರಿಯಾಗಿ ಯಾರಿಗೂ ತಿಳಿದಿಲ್ಲ. ಬಹುಶಃ ಪೋಲೀಸರಿಗೂ!! ‘ಅವರೆಲ್ಲ ಕಳ್ಳರು, ನಾವು ನೋಡ್ಕೋತೀವಿ ಬಿಡಿ’ ಅಂತ ಪೋಲೀಸರು; ‘ಇಲ್ಲ. ಇದು ಮತ್ತೊಂದು ಲವ್ ಜಿಹಾದ್ ಕೇಸು. ಬಸ್ಸಿನಲ್ಲಿ ಕಾಲೇಜು ಹುಡುಗರು ಲವ್ ಜಿಹಾದ್ ಮಾಡಿದ್ರೆ ಇಲ್ಲಿ ಇವರು. ನಮ್ಮ ಹುಡುಗರಿಗೆ ಅವರ ಬಸ್ಸಿನಲ್ಲಿ ರಕ್ತ ಬರೋ ರೀತಿ ಹೊಡೆದರೂ ನಾವು ಸುಮ್ಮನಿರಬೇಕಾ?’ ಅಂತ ಸಂಘದವರು.
ಮಾತಿಗೆ ಮಾತು ಬೆಳೀತು. ಯಾರಲ್ಲೂ ತಾಳ್ಮಯಿರಲಿಲ್ಲ. ಮೈಸೂರಿನಲ್ಲಿ ಕೈಹತ್ತುತ್ತಿದ್ದ ಹಣವನ್ನು ನೆನೆಯುತ್ತಾ ನಾಲ್ವರು ಕಳ್ಳರು ಠಾಣೆಯೊಳಗೆ ಸೊಳ್ಳೆ ಹೊಡೆಯುತ್ತಿದ್ದರು.
ಮಾತು ಮಾತಲ್ಲೇ ಉಳಿಯಲಿಲ್ಲ.
ಯಾರೋ ಠಾಣೆಯೆಡೆಗೆ ಕಲ್ಲೆಸೆದರು. ಮತ್ಯಾರೋ ಚಪ್ಪಲಿ ತೂರಿದರು. ಮರುಕ್ಷಣ ಎತ್ತನೋಡಿದರತ್ತ ಪೋಲೀಸರ ಲಾಠಿ ರೊಯ್ಯನೆ ಬೀಸಲಾರಂಭಿಸಿತು.
ನಗರ ಉದ್ವಿಗ್ನ; ನಿಷೇಧಾಜ್ಞೆ ಜಾರಿ.
* * * *
ಕೊನೆಗೆ
ಪ್ರತಿಭಟನಾ ಸಭೆ. ಒಂದೆರಡು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿಯರನ್ನು ಬಲವಂತವಾಗಿ ಕರೆತಂದು ಕೂರಿಸಿದ ಪರಿಣಾಮ ಸಭೆ ‘ಬೃಹತ್ತಾಗಿತ್ತು’. ಪೋಲೀಸರಿಗೆ, ಅವರಿಗೆ, ಇವರಿಗೆ ಎಲ್ಲರಿಗೂ ಉಗಿದು ಉಪ್ಪಿನಕಾಯ್ಹಾಕಿ ಕೊನೆಯಲ್ಲಿ ಬಾಯಿಗೆ ಕಪ್ಪು ಬಟ್ಟೆ ಸುತ್ತಿಕೊಂಡು ಮುಖ್ಯರಸ್ತೆಯಲ್ಲಿ ಮೆರವಣಿಗೆ ಹೊರಟರು. ಅಂದು ಶುಕ್ರವಾರವಾದ್ದರಿಂದ ಮೆರವಣಿಗೆ ಮಸೀದಿಯ ಕಡೆಗೇ ಹೆಜ್ಜೆ ಹಾಕಿದ್ದು ಕೇವಲ ಆಕಸ್ಮಿಕವಷ್ಟೇ! ಹೆಚ್ಚು ಅರ್ಥ ಕಲ್ಪಿಸುವ ಬುದ್ಧಿಜೀವಿಗಳ ಬುದ್ಧಿ ನಮಗೆ ಖಂಡಿತ ಬೇಡ.
ಬಸ್ಸಿನಲ್ಲಿ: -
“ನೋಡೋ ರಫೀಕ. ಇವತ್ತು ನಮ್ಮಣ್ಣನ ಮೊಬೈಲ್ ತಂದಿದ್ದೀನಿ. ಟಚ್ ಸ್ಕ್ರೀನ್ದೂ” ಗಣೇಶ ಜೇಬಿನಿಂದ ಮೊಬೈಲಿನ ಚೂರೇ ಚೂರು ದರ್ಶನ ಮಾಡಿಸಿ ಒಳಗೆ ಸೇರಿಸಿದ. ರಫೀಕನ ಕಣ್ಣಲ್ಲಿ ಆಸೆ ನೀರೂರಿತು. “ಲೋ ನಿಮ್ಮಣ್ಣನಿಗೆ ಗೊತ್ತಾದರೆ?”
“ಅಣ್ಣನಿಗೆ ಜ್ವರ ಬಂದು ಮಲಗಿದ್ದ. ಎತ್ತುಕೊಂಡು ಬಂದ್ಬಿಟ್ಟೆ. ಗೊತ್ತಾದ ಮೇಲೆ ನೋಡಿಕೊಂಡರಾಯಿತು ಬಿಡು”
“ತೋರಿಸೋ ಮೊಬೈಲ್ನಾ”
“ಹೋಗಲೇ! ನಿನ್ನೆ ನನಗೆ ಹೊಡೆಯಕ್ಕೆ ಬಂದೆ. ಮೊಬೈಲೂ ತೋರಿಸಲ್ಲ, ಏನೂ ತೋರಿಸಲ್ಲ”
“ಲೋ ಗಣೇಶಾ! ಇಷ್ಟೆಯೇನೋ ಫ್ರೆಂಡ್ ಶಿಪ್ಪೂ? ನಿನ್ನ ಶರ್ಟಿನ ಗುಂಡಿ ನಾನೇ ಹೊಲೆದುಕೊಡ್ತೀನಿ. ಪ್ಲೀಸ್ ತೋರಿಸೋ”
ಕಣ್ಣುಮುಚ್ಚಿ ಗಹನವಾಗಿ ಯೋಚಿಸಿ ಕಣ್ತೆರೆದು “ಸರಿ. ತೋರಿಸ್ತೀನಿ. ನಮ್ಮ ಮನೆಯವರಿಗೆ ಹೇಳಬಾರದು ನೀನು”. ತಲೆಯಾಡಿಸಿದ ರಫೀಕ. ಮೊಬೈಲನ್ನು ಕೈಯಲ್ಲಿಡಿದು “ಯಾವ ಗೇಮಿದೆಯೋ ಇದರಲ್ಲಿ?” ಎಂದು ಕೇಳಿದ.
“ಕಾರ್ ರೇಸಿದೆ. ಬೊಂಬಾಟಾಗಿದೆ. ಆಡ್ತೀಯಾ?”
“ಹ್ಞೂ ಹ್ಞೂ” ಕಣ್ಣರಳಿಸಿದ.
“ಒಂದೇ ಒಂದು ಸಲ. ಜಾಸ್ತಿ ಕೇಳಬಾರದು”
“ಸರಿ ಕಣೋ. ಒಂದೇ ಸಲ. ವಾಪಸ್ಸು ಕೊಟ್ಬಿಡ್ತೀನಿ” ರಫೀಕ ಕಾರ್ ರೇಸನ್ನು ಶುರುಮಾಡುತ್ತಿದ್ದಂತೆ ಚಲಿಸುತ್ತಿದ್ದ ಬಸ್ಸು ಮೆರವಣಿಗೆಯ ಕಾರಣದಿಂದ ಸ್ತಬ್ಧವಾಯಿತು. ಕತ್ತು ಮೇಲೆತ್ತಿ ನೋಡುತ್ತಾ “ಏನಾಯ್ತೋ ಗಣೇಶಾ? ಬಸ್ಯಾಕೆ ನಿಂತೋಯ್ತು?”.
“ಏನೋ ಗೊತ್ತಿಲ್ಲಪ್ಪ! ಜನ ಅಷ್ಟೊಂದು ಇರೋದು ನೋಡಿದ್ರೆ ಏನೋ ಸ್ಟ್ರೈಕಿರಬೇಕು. ಲೇ ಲೇ ಕಾರು ಎತ್ತೆತಲೋ ಹೋಗ್ತಿದೆ. ಸರಿಯಾಗಿ ನೋಡ್ಕೊಂಡು ಆಡು. ಇಲ್ಲಾಂದ್ರೆ ವಾಪಸ್ಸು ಕೊಡು” ಮೊಬೈಲಿನ ಕಡೆಗೆ ನೋಡುತ್ತಾ ರೇಗಿದ ಗಣೇಶ. . .
* * * * *
ಡಾ. ಅಶೋಕ್. ಕೆ. ಆರ್,

Wednesday, December 7, 2011

ಶಿಕ್ಷಣದ ಮಾಧ್ಯಮ ಯಾವುದಿರಬೇಕು?


ಶಿಕ್ಷಣದ ಮೂಲಉದ್ದೇಶ ನಮ್ಮನ್ನು ಸಾಕ್ಷರಗೊಳಿಸುವುದರ ಜೊತೆಗೆ ನಮ್ಮನ್ನು ವಿಚಾರಪ್ರಿಯರನ್ನಾಗಿ ಮಾಡಿ ನಮ್ಮ ವೈಚಾರಿಕತೆಯನ್ನು ಉನ್ನತ ಮಟ್ಟಕ್ಕೇರಿಸಿ ಹಳೆಯ ಆಚಾರ ವಿಚಾರಗಳಲ್ಲಿ ಉತ್ತಮವಾದ ನಂಬಿಕೆಗಳನ್ನು ಉಳಿಸಿಕೊಂಡು ಮೂಢನಂಬಿಕೆಗಳನ್ನು ತೊಡೆದು ಜಾತಿ – ಧರ್ಮದ ಕಂದಕ ಅಂತರವನ್ನು ಕಡಿಮೆಗೊಳಿಸಿ ಉತ್ತಮ ಮಾನವರನ್ನಾಗಿ ಮಾಡುವುದು. ಆದರಿವು ಆಗುತ್ತಿದೆಯಾ? ಅತಿ ಹೆಚ್ಚು ಅಂಕಗಳನ್ನು ಪಡೆಯುವ, ಹೆಚ್ಚು ಶಿಕ್ಷಿತರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತರೂ {ಕೇವಲ ಸಾಕ್ಷರರು ಎಂಬುದು ಸರಿಯಾದ ಪದ} ಕೂಡ ಮಡೆ ಮಡೆ ಸ್ನಾನದಂತಹ ಆಚರಣೆಗೆ ಬೆಂಬಲ ವ್ಯಕ್ತಪಡಿಸುವ ರೀತಿ, ಉಗ್ರ ಬಲಪಂಥೀಯ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಭದ್ರಗೊಳಿಸಿಕೊಳ್ಳುತ್ತಿರುವ ಬಗೆಯನ್ನು ನೋಡಿದರೆ ಎಲ್ಲೋ ನಮ್ಮ ಶಿಕ್ಷಣ ಹಾದಿ ತಪ್ಪಿದೆ ಎನ್ನಿಸುವುದಿಲ್ಲವೇ? ನಮ್ಮ ತಂದೆಯವರ ಮದುವೆಯ ಕಾಲದಲ್ಲಿ ಪ್ರಾಮುಖ್ಯತೆ ಪಡೆಯದ ಜಾತಕಫಲ, ಜ್ಯೋತಿಷ್ಯಗಳು [ಆ ಕಾಲದ ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕವೇ ಸರಿಯಾಗಿ ತಿಳಿದಿರುತ್ತಿರಲಿಲ್ಲ, ಇನ್ನು ಜಾತಕ ಕೂಡಿಸುವುದು ಎಲ್ಲಿ ಬಂತು?!] ‘ವಿದ್ಯೆ’ಯ ಮಟ್ಟ ಹೆಚ್ಚುತ್ತಿದ್ದಂತೆ ಪ್ರಮುಖವಾಗುತ್ತಿವೆ ಏಕೆ?
          ಸಚಿವ ಕಾಗೇರಿಯವರು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ, ವಿದ್ಯಾರ್ಥಿಗಳು ಬಾರದ ಕನ್ನಡ ಶಾಲೆಗಳನ್ನು ಮುಚ್ಚುವ ಮಾತುಗಳನ್ನಾಡಿದ ನಂತರ ಶಿಕ್ಷಣದ ಮಾಧ್ಯಮದ ಭಾಷೆ ಯಾವುದಿರಬೇಕೆಂಬ ಬಗ್ಗೆ ಮತ್ತೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಇವತ್ತಿನ ಮಟ್ಟಿಗೆ ಶಿಕ್ಷಣದ ಉದ್ದೇಶ ಕೆಲಸ ಪಡೆಯಲು ಹಣ ಸಂಪಾದಿಲು ಇರುವ ಒಂದು ಮಾನದಂಡ ಅಷ್ಟೇ! ನೀವು ವೈದ್ಯನಾಗಿದ್ದರೆ ಎಷ್ಟು ಜನಪರ ಎಂದಾರೂ ಕೇಳುವುದಿಲ್ಲ; ಇಂಜಿನಿಯರ್ರಾಗಿದ್ದರೆ ಎಷ್ಟು ಹೊಸ ಸಾಫ್ಟ್ ವೇರ್ ಕಂಡುಹಿಡಿದಿದ್ದೀಯ? ಎಷ್ಟರ ಮಟ್ಟಿಗೆ ಹೊಸ ರೀತಿಯ ಯೋಜನೆಗಳು ನಿನ್ನಲ್ಲಿವೆ ಎಂದ್ಯಾರು ಪ್ರಶ್ನಿಸುವುದಿಲ್ಲ; ಉಪನ್ಯಾಸಕ ವೃತ್ತಿಯಲ್ಲಿದ್ದರೆ ಎಷ್ಟರ ಮಟ್ಟಿಗೆ ನಿಮ್ಮ ಪಾಠ ವಿದ್ಯಾರ್ಥಿಗಳನ್ನು ತಲುಪುತ್ತಿದೆ ಎಂದು ಪ್ರಶ್ನಿಸುವವರು ವಿರಳ. ಸಮಾಜ ಕೇಳುವ ಮೊದಲ ಪ್ರಶ್ನೆ “ಎಷ್ಟು ಸಂಪಾದಿಸುತ್ತಿದ್ದೀಯಾ?” ಎಂದು ಮಾತ್ರ. ಅಲ್ಲಿಗೆ ಶಿಕ್ಷಣದ ಅಂತಿಮ ಗುರಿ ಕೇವಲ ಹಣ ಗಳಿಸುವಿಕೆ ಮಾತ್ರ ಎಂಬ ಮನಸ್ಥಿತಿಗೆ ತಲುಪಿದ್ದೇವೆ.
          ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿರಬೇಕೋ ಆಂಗ್ಲಭಾಷೆಯಲ್ಲಿರಬೇಕೋ ಎಂಬುದು ಮತ್ತೊಂದು ಜಿಜ್ಞಾಸೆಯ ಸಂಗತಿ. ಜಪಾನ್ ಚೀನ ಫ್ರಾನ್ಸಿನ ಉದಾಹರಣೆ ತೆಗೆದುಕೊಂಡು ಮಾತೃಭಾಷೆಯ ಶಿಕ್ಷಣವೇ ಉತ್ತಮವೆಂದು ವಾದಿಸುವವರು ಬಹಳ ಮಂದಿ ಇದ್ದಾರೆ. ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ಮುನ್ನ ಸರ್ವಶಿಕ್ಷಣವನ್ನೂ ಕನ್ನಡ [ಅಥವಾ ಭಾರತದ ಯಾವುದೇ ಭಾಷೆ] ಭಾಷೆಯಲ್ಲಿ ಕೊಡುವುದಕ್ಕೆ ನಾವೆಷ್ಟು ತಯಾರಿದ್ದೇವೆ ಎಂಬುದನ್ನು ಪರಿಶೀಲಿಸಬೇಕು. ಹತ್ತನೇ ತರಗತಿಯವರೆಗೆ, ಪಿ ಯು ಸಿವರೆಗಿನ ಪಠ್ಯಪುಸ್ತಕಗಳು ಕನ್ನಡದಲ್ಲಿ ಲಭ್ಯವಿದೆ. ಬಿ ಎಸ್ಸಿ, ಬಿ ಎಯ ಪುಸ್ತಕಗಳು ಕೂಡ ತಕ್ಕಮಟ್ಟಿಗೆ ಲಭ್ಯ. ಆದರೆ ಇತರೆ ಉನ್ನತ ಶಿಕ್ಷಣಗಳಾದ ವೈದ್ಯಕೀಯ, ಇಂಜಿನಿಯರಿಂಗಿನ ಪುಸ್ತಕಗಳು? ಉಹ್ಞೂ ಲಭ್ಯವಿಲ್ಲ. ಎಲ್ಲಾ ಹಂತದ ಪಠ್ಯಪುಸ್ತಕಗಳು ಕನ್ನಡದಲ್ಲೇ ಲಭ್ಯವಿದ್ದಾಗ ಮಾತ್ರ ಪ್ರಾಥಮಿಕ ಹಂತದಿಂದ ಮಾತೃಭಾಷೆಯ ಶಿಕ್ಷಣಕ್ಕೆ ಒತ್ತು ನೀಡುವುದನ್ನು ಸಮರ್ಥಿಸಿಕೊಳ್ಳಬಹುದು. ಮೂಲತಃ ನಾನು ವೈದ್ಯವೃತ್ತಿಯಲ್ಲಿರುವುದರಿಂದ ಕನ್ನಡ, ಹಿಂದಿ, ಮಲಯಾಳಿ ಮಾಧ್ಯಮದಿಂದ ಬಂದ ನನ್ನ ಕೆಲವು ಸ್ನೇಹಿತರು, ವಿದ್ಯಾರ್ಥಿಗಳು ಮೊದಲ ವರ್ಷದ ವೈದ್ಯಕೀಯ ಜೀವನದಲ್ಲಿ ಅನುಭವಿಸಿದ ಕೀಳರಿಮೆಯನ್ನು ಕಂಡಿರುವೆನು. ಒಂದಷ್ಟು ಜನ ಆ ಕೀಳರಿಮೆ, ಹೊಸ ಆಂಗ್ಲ ಪದಗಳ ಕಲಿಯುವಿಕೆಯಲ್ಲಿನ ಕಷ್ಟದಿಂದಾಗಿ ಆರು ತಿಂಗಳು, ಒಂದು ವರ್ಷ ಹಿಂದೆ ಉಳಿದರು. ಈ ಸುಖಕ್ಯಾಕೆ ಅವರು ಕನ್ನಡ ಮಾಧ್ಯಮದಲ್ಲಿ ಓದಬೇಕಿತ್ತು?
          ಅಲ್ಲಿಗೆ ಶಿಕ್ಷಣದ ಮಾಧ್ಯಮ ನಿರ್ಧಾರವಾಗಬೇಕಿರುವುದು
Ø  ಆ ಭಾಷೆಯಲ್ಲಿ ಶೈಕ್ಷಣಿಕ ಅಗತ್ಯದ ಎಲ್ಲ ಪುಸ್ತಕಗಳ ಲಭ್ಯತೆಯ ಮೇಲೆ.
Ø  ಕೆಲಸ ಸಂಪಾದಿಸಲು, ಜೀವನ ಸಾಗಿಸಲು ಆ ಭಾಷೆಯ ಉಪಯೋಗ ಅನಿವಾರ್ಯವೆನಿಸಿದಾಗ. ಇಂದು ಪಾನ್ ಕಾರ್ಡ್, ರೇಷನ್ ಕಾರ್ಡ್ ಆಗಲಿ, ಬಸ್ಸು ರೈಲಿನ ಮುಂಗಡ ಟಿಕೆಟ್ ಬುಕಿಂಗ್ಗಿಗಾಗಲೀ ಆನ್ ಲೈನ್ ನಲ್ಲೇ ಅರ್ಜಿ ತುಂಬುವ ಅವಕಾಶವಿದೆ. ಆದರಲ್ಲೂ ಕೂಡ ಆಂಗ್ಲ ಭಾಷೆಯ ಜ್ಞಾನ ಉಪಯೋಗಕ್ಕೆ ಬರುತ್ತಿದೆಯೇ ಹೊರತು ಉಳಿದ ಭಾರತೀಯ ಭಾಷೆಗಳಲ್ಲ.
Ø  ನನ್ನ ಗೆಳೆಯನೊಬ್ಬ ಹೇಳಿದಂತೆ ಗಣಿತ ಮತ್ತು ವಿಜ್ಞಾನ ಆಂಗ್ಲಭಾಷೆಯಲ್ಲಿ, ಸಮಾಜ ವಿಜ್ಞಾನ ಮಾತೃಭಾಷೆಯಲ್ಲಿ ಇರುವಂತೆ ನೋಡುವುದು. ಇದರ ಸಾಧಕ ಭಾಧಕಗಳೆಷ್ಟು?
ನಗರಗಳಲ್ಲಿನ ಶಾಲಾ ಕಾಲೇಜುಗಳೆಲ್ಲ ಖಾಸಗಿಯವರ ಸುಪರ್ದಿಯಲ್ಲಿ ಆಂಗ್ಲಮಯವಾಗುತ್ತಿರುವಾಗ ಹಳ್ಳಿಯ ಸರಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡವನ್ನೇ ಕಡ್ಡಾಯಗೊಳಿಸುವ ಮಾತನಾಡುವುದು ಹಳ್ಳಿ ನಗರಗಳ ನಡುವೆ ಈಗಾಗಲೇ ಇರುವ ಬೃಹತ್ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದಷ್ಟೇ. ಕೊನೆಯದಾಗಿ ವ್ಯಕ್ತಿಯ ಭಾಷಾಪ್ರೇಮ ಅವನ/ಅವಳ ಶೈಕ್ಷಣಿಕ ಭಾಷೆಯ ಮೇಲೆ ಖಂಡಿತ ಅವಲಂಬಿತವಾಗುವುದಿಲ್ಲ. ಪಿ ಯುವರೆಗೂ ಕನ್ನಡದಲ್ಲೇ ಓದಿದವರು ಆಂಗ್ಲಪ್ರೇಮಿಯಾಗಿ ಬದಲಾದಂತೆ ಆಂಗ್ಲಮಾಧ್ಯಮದಲ್ಲಿ ಓದಿದವರು ತಮ್ಮ ಮಾತೃಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಬಹಳಷ್ಟು ಉದಾಹರಣೆಗಳುಂಟು. ಆಂಗ್ಲಮಾಧ್ಯಮದ ಶಿಕ್ಷಣ ಕೂಡ ಕೊನೆ (a+b)2 = a2+b2+2ab ಎಂದು ತಿಳಿಯುವುದಕ್ಕೆ ಮಾತ್ರ ಸೀಮಿತಗೊಳ್ಳುತ್ತಿರುವುದು ಇಂದಿನ ಶಿಕ್ಷಣದ ವೈಫಲ್ಯ.
-      ಡಾ ಅಶೋಕ್. ಕೆ. ಆರ್

Thursday, December 1, 2011

ಶುಚಿಗೊಳ್ಳದ ಮನಗಳು ಮತ್ತು ಮಡೆ ಮಡೆ ಸ್ನಾನ


 
ಜನರ ನಂಬಿಕೆಗಳೇ ಮೌಡ್ಯದಿಂದ ಕೂಡಿರುವಾಗ ಆಳುವ ‘ಜವಾಬ್ದಾರಿಯುತ’ ಸರಕಾರಗಳು ಆ ಮೌಡ್ಯವನ್ನು ಮತ್ತಷ್ಟು ಉತ್ತೇಜಿಸಬೇಕೋ ಅಥವಾ ಇಂದಿನವರ ಭಾವನೆಗಳಿಗೆ ಕೊಂಚ ಧಕ್ಕೆಯಾದರೂ ಚಿಂತಿಲ್ಲ ಎಂಬ ಧೃಡಮನಸ್ಸಿನಿಂದ ಆ ಮೌಡ್ಯಗಳನ್ನು ತೊಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೋ?

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಮಡೆಸ್ನಾನ ಅಥವಾ ಉರುಳುಸೇವೆ ಆಚರಣೆ ಈ ವರ್ಷವೂ ಅವ್ಯಾಹತವಾಗಿ ಮುಂದುವರೆದಿದೆ. ಕಳೆದ ವರ್ಷ ಬಹಳಷ್ಟು ಸಂಘಟನೆಗಳ ವಿರೋಧದ ನಡುವೆಯೂ ‘ಜನರ ಭಕ್ತ ಮನಸ್ಸನ್ನು’ ಘಾಸಿಗೊಳಿಸಲಿಚ್ಛಿಸದ ಸರಕಾರದ ರಕ್ಷಣೆಯಲ್ಲಿ ಮಡೆಸ್ನಾನ ನೆರವೇರಿತು. ಬ್ರಾಹ್ಮಣರು ಉಂಡೆದ್ದ ಎಲೆಯ ಮೇಲೆ ಉರುಳಾಡಿ ಭಕ್ತ ವರ್ಗ ಆನಂದತುಂದಲಿತಗೊಂಡಿತು. ಸುಬ್ರಹ್ಮಣ್ಯ ಕಣ್ಣು ಮುಚ್ಚಿಕುಳಿತಿದ್ದನೇನೋ?! ಈ ವರ್ಷವೂ ಮತ್ತದೇ ಮುಂದುವರಿಕೆ. ಈ ಬಾರಿ ಮಡೆಸ್ನಾನಕ್ಕೆ ಅವಕಾಶವಿಲ್ಲ ಎಂದು ಮೊದಲು ಉಚ್ಛರಿಸಿದ್ದ ದೇವಸ್ಥಾನದ ಆಡಳಿತಾಧಿಕಾರಿ ಸುಂದರಭಟ್ ‘ಆಚರಣೆಗೆ ಭಕ್ತಾಧಿಗಳಿಂದ ಭಾರಿ ಬೇಡಿಕೆ ಬಂದ’ ಕಾರಣವೊಡ್ಡಿ ನಿಷೇಧವನ್ನು ಹಿಂಪಡೆದಿದ್ದಾರೆ. ಎಂಜಲೆಲೆಯ ಮೇಲೆ ಉರುಳುವ ಸುಖದಲ್ಲಿ ಭಕ್ತಾದಿಗಳು, ಉಂಡೆದ್ದ ಬ್ರಾಹ್ಮಣರ ಮನಸ್ಸುಗಳ ವಿವೇಕದ ಬೆಳಕು ನಂದಿಹೋಗಿದೆ.

ಜನರ ನಂಬಿಕೆಗಳು ಅದು ಮೌಡ್ಯವಾಗಿದ್ದರೂ, ಅದರ ಸಮರ್ಥಿಸಿಕೊಳ್ಳುವಿಕೆ, ಭಕ್ತರ ಒತ್ತಾಯದ ಮೇರೆಗೆ ಸರ್ವವನ್ನೂ ಅಧಿಕೃತವಾಗಿ ಮಾನ್ಯ ಮಾಡುವುದು ಎಷ್ಟರ ಮಟ್ಟಿಗೆ ಸರಿ? ‘ಬಹುಜನರ, ಭಕ್ತರ ಮನಸ್ಸನ್ನು ನೋಯಿಸಲಿಚ್ಛಿಸದೆ’ ಎಂಬ ವಾಕ್ಯವನ್ನೇ ಹಿಂದೆ ಆಳಿದವರೆಲ್ಲ ಬಳಸಿಕೊಂಡಿದ್ದರೆ ಸತಿ ಪದ್ಧತಿ, ಬಾಲ್ಯ ವಿವಾಹ, ಸಕೇಶಿ ಪದ್ಧತಿ, ದೇವದಾಸಿ ಪದ್ದತಿ, ಅಸ್ಪೃಶ್ಯತೆಗಳೆಲ್ಲ ಇಂದೂ ಕೂಡ ಬಹಿರಂಗವಾಗೇ ಆಚರಣೆಯಲ್ಲಿರಬೇಕಿತ್ತಲ್ಲವೇ? ಅವುಗಳನ್ನೆಲ್ಲ ಆಚರಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಕಾನೂನುಗಳನ್ನು ಮಾಡಿದ್ದೂ ಕೂಡ ಮಡೆಸ್ನಾನದ ಸಮರ್ಥಕರ ದೃಷ್ಟಿಯಲ್ಲಿ ತಪ್ಪೇ ಇರಬೇಕು.

ಹಿಂಗ್ಯಾಕೋ ?! - ಇಲ್ಲಿ ಬ್ರಾಹ್ಮಣರು ಕೂಡ ಉರುಳುತ್ತಾರೆ ಎಂಬ ಸಮರ್ಥನೆ ಕೊಡುವವರು ಹೆಚ್ಚುತ್ತಿದ್ದಾರೆ. ಯಾರೇ ಉರುಳಿದರು ಅದು ಮೂಡನಂಬಿಕೆಯೇ ಅಲ್ಲವೇ? ಹೋಗಲಿ ಅವರ ಮಾತಿನಂತೆ ಹೋಗುವುದಾದರೆ ಇತರೆ ಜಾತಿ ವರ್ಗದವರು ಉಂಡ ಎಲೆಗಳ ಮೇಲೆ ಉರುಳಲು ಬ್ರಾಹ್ಮಣರು ತಯಾರಿದ್ದಾರ?..

Friday, November 25, 2011

ಪತ್ರಕರ್ತನ ಹತ್ಯೆಗೆ ಪತ್ರಕರ್ತೆಯ ಸಹಾಯ ಹಸ್ತ?!

ಜೆ ಡೆ source - youthkiawaaz.com

ಜೂನ್ ಹನ್ನೊಂದು ೨೦೧೧ರಲ್ಲಿ ಹತ್ಯೆಯಾದ ಮಿಡ್ ಡೇ ಪತ್ರಿಕೆಯ ಪತ್ರಕರ್ತ ಜೆ ಡೆಯ ಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಏಶಿಯನ್ ಏಜ್ ನ ಪತ್ರಕರ್ತೆ, ಡೆಪ್ಯುಟಿ ಬ್ಯುರೋ ಚೀಫ್ 'ಜಿಗ್ನ ವೋರ'ಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಜೆ ಡೆ ಯ ಚಲನವಲನದ ಬಗ್ಗೆ ಹಂತಕರಿಗೆ ಮಾಹಿತಿ ನೀಡಿದ್ದು, ಬಂಧನದ ನಂತರ ಹತ್ಯೆಯ ಹಿಂದೆ ದಾವೂದ್ ಇಬ್ರಾಹಿಂನ ಕೈವಾಡವಿರುವುದಾಗಿ ತನ್ನ ಪತ್ರಿಕೆಯಲ್ಲಿ ಪದೇಪದೇ ಬರೆದು ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ ಗಂಬೀರ ಆರೋಪಗಳನ್ನು ಮಾಡಲಾಗಿದೆ. ಹತ್ಯೆಯ ಹಿಂದೆ ಚೋಟ ರಾಜನ್ ತಂಡದ ಕೈವಾದವಿದ್ದು ಅವರಿಗೆ ಜಿಗ್ನ ವೋರ ಸಹಕರಿಸಿರುವುದು ಪ್ರಾಥಮಿಕ ತನಿಖೆಗಳಿಂದ ದೃಡಪಟ್ಟಿದೆ.
 
jigna vora; source-ndtv
ಪೇಡ್ ನ್ಯೂಸ್, ಪತ್ರಕರ್ತರ ಭ್ರಷ್ಟಾಚಾರಗಳ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿರುವ ಈ ದಿನಗಳಲ್ಲಿ  ಪತ್ರಕರೊಬ್ಬರ ಹತ್ಯೆಯಲ್ಲಿ ಪತ್ರಕರ್ತರೇ ಆರೋಪಗೊಳಗಾಗಿ ಬಂಧನೋಕ್ಕೊಳಗಾಗಿರುವುದು ಪತ್ರಿಕೋದ್ಯಮದ ಬಗ್ಗೆ ಜನರಲ್ಲಿ ಹುಟ್ಟಿರುವು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ.

Tuesday, October 25, 2011

ಕೊನೆಯ ಪುಟಗಳು



          ಅಕ್ಟೋಬರ್ 1 – ಪ್ರತಿಯೊಬ್ಬನಿಗೂ ವರ್ಷದ ಯಾವುದಾದರೊಂದು ದಿನ ಪ್ರಮುಖವಾಗಿರುತ್ತೆ. ಹೈಸ್ಕೂಲಿನಲ್ಲಿ ಪುಂಡಾಟಗಳು; ಮುಂಜಾನೆ ಟ್ಯೂಷನ್ನೂ, ಬೆಳಿಗ್ಗೆ ಕಾಲೇಜು, ಸಂಜೆ ಮತ್ತೊಂದೆರಡು ಟ್ಯೂಷನ್ನೂ, ರಾತ್ರಿ ಒಂದಷ್ಟು ಓದು – ಪಿ ಯು ಸಿಯಲ್ಲಿ ಬೇರೇನನ್ನೂ ಯೋಚಿಸಲು ಸಮಯವಿರಲಿಲ್ಲ. ಓದಿದ್ದು ವ್ಯರ್ಥವಾಗದೆ ಮೆಡಿಕಲ್ ಸೀಟು ಸಿಕ್ಕಿ ಇವತ್ತಿಗಾಗಲೇ ಹತ್ತು ವರ್ಷವಾಯಿತು. ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದ ಚೇತನ್ ನ ಪರಿಚಯವಾದ ದಿನವಿದು. ನನ್ನ ಜೀವನದ ಪ್ರಮುಖ ದಿನ. ಕೆಲವು ವರ್ಷಗಳ ಹಿಂದಿನವರೆಗೂ ನನ್ನಲ್ಲಿ ಉತ್ಸಾಹ ಮೂಡಿಸುತ್ತಿದ್ದ ದಿನ. ಆದರೀಗ? ಆತ್ಮಸಾಕ್ಷಿಯ ಇರಿತಕ್ಕೆ ಜರ್ಝರಿತನಾಗಿದ್ದೇನೆ.
          ಅಕ್ಟೋಬರ್ 2 – ಅದು ಆದರ್ಶಗಳು ಉತ್ಕರ್ಷದಲ್ಲಿದ್ದ ಕಾಲ. ಆಸ್ಪತ್ರೆಯ ಹತ್ತಿರದ ಅಗ್ರಹಾರ ಸರ್ಕಲ್ಲಿನಲ್ಲಿದ್ದ ಗಣೇಶ ಟೀ ಶಾಪಿನಲ್ಲಿ ಕುಳಿತು ಬೈಟು ಚಾ ಕುಡಿಯುತ್ತ ಸಿಗರೇಟಿನ ಹೊಗೆಯನ್ನು ಅಂತರ್ಗತವಾಗಿಸುತ್ತಿದ್ದ ಸಮಯದಲ್ಲಾಗಲೀ, ಅರ್ಥವೇ ಇಲ್ಲದ ಚಿತ್ರವೊಂದಕ್ಕೆ ಹೋಗಿ ಖಾಲಿ ಚಿತ್ರಮಂದಿರದಲ್ಲಿ ಕುಳಿತಾಗಾಗಲೀ, ರಾತ್ರಿ ಹೈವೇ ಡಾಬಾದಲ್ಲಿ ಊಟಕ್ಕೆ ಹೋದಾಗಾಗಲೀ ಬರೀ ಆದರ್ಶ, ಕ್ರಾಂತಿ, ಹೋರಾಟ, ಬದಲಾವಣೆಯ ಬಗ್ಗೆಯೇ ಮಾತು. ‘ಆದರ್ಶ, ಹೋರಾಟಗಳ ಬಗ್ಗೆ ಘಂಟೆಗಟ್ಟಲೇ ಮಾತನಾಡಿದಾಕ್ಷಣ ಏನನ್ನೂ ಬದಲಿಸಲಾಗದು. ಕ್ರಾಂತಿಯ ಬಗ್ಗೆ ಮಾತನಾಡುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸೋದು ಸುಲಭದ ಕೆಲಸ. ನಿಜಕ್ಕೂ ಮುಂದಿನ ನಮ್ಮ ವಾಸ್ತವ ಜೀವನದಲ್ಲಿ ಇವತ್ತಿನ ಆದರ್ಶಗಳನ್ನು ಪಾಲಿಸುತ್ತೀವಾ?’ ನಿನ್ನ ಗಂಭೀರ ಮಾತುಗಳಿಗೆ ನಗೆಯಾಡುತ್ತ ‘ಒಳ್ಳೆ ನಿರಾಶವಾದಿ ಕಣಪ್ಪ ನೀನು’ ಎಂದು ಹೇಳುತ್ತ ನಮ್ಮ ಕಲ್ಪನಾ ಲೋಕದ ಪಯಣವನ್ನು ಮುಂದುವರಿಸುತ್ತಿದ್ದೆವು. ನೆನಪಿದೆಯಾ ಚೇತು? ಗಾಂಧಿ ಬಗ್ಗೆ ಘನಗಾಂಭೀರ್ಯದಿಂದ ಚರ್ಚಿಸುತ್ತ ನಾವೆಲ್ಲ ಟ್ರಿಪಲ್ ಎಕ್ಸ್ ರಮ್ ಹೀರುತ್ತಿದ್ದರೆ ನಿನ್ನ ಕಣ್ಣಂಚಿನಲ್ಲಿ ಸಣ್ಣ ವ್ಯಂಗ್ಯದ ನಗು. ಆ ನಗುವನ್ನು ಮರೆಮಾಡೋದಿಕ್ಕೋಸ್ಕರವಾಗಿಯೇ ಮುಖದ ಮುಂದೆ ಸಿಗರೇಟಿನ ಹೊಗೆ ತುಂಬಿಸುತ್ತಿದ್ದೆಯಲ್ಲವೇ?
          ನೀನು ಕೊಟ್ಟ ಸ್ಪೂರ್ತಿಯಿಂದ ಡೈರಿ ಬರೆಯೋದಿಕ್ಕೆ ಆರಂಭಿಸಿ ಒಂಭತ್ತು ವರ್ಷವಾಯಿತು. ನನ್ನ ಮನೆಯವರ ಕೈಗೆ ಸಿಕ್ಕಿದರೆ ಏನೇನಾಗುತ್ತಿತ್ತೋ?!
          ಅಕ್ಟೋಬರ್ 3
ಜೀವದ ಗೆಳೆಯ ಚೇತನ್,
          ಸುಮನ ನನ್ನನ್ನು ತೊರೆದು ಬೇರೆಯವನನ್ನು ವರಿಸಿದ ದಿನ ಅನುಭವಿಸಿದ ಯಾತನೆ, ಬೇಸರವನ್ನು ಇವತ್ತಿಗೂ ಮರೆಯಲಾಗಿಲ್ಲ. ಅದಕ್ಕಿಂತಲೂ ಮಿಗಿಲಾದ ಬೇಸರವಿರಲು ಸಾಧ್ಯವೇ ಇಲ್ಲವೆಂದು ಭಾವಿಸಿದ್ದೆ. ಇಂದು ಮನದಲ್ಲಿ ಮೂಡುತ್ತಿರುವ ಬೇಸರ, ಜಿಗುಪ್ಸೆ; ಈ ಭಾವನೆಗಳನ್ನೆಲ್ಲ ಹೇಳಿಕೊಳ್ಳಲು ಹತ್ತಿರದವರ್ಯಾರೂ ಇಲ್ಲದ ಅಸಹಾಯಕತೆ....
          “ಏನು ಡಾಕ್ಟ್ರೋ ಇವನು. ದುಡ್ಡು ದುಡ್ಡು ಅಂತ ಸಾಯ್ತಾನೆ. ಐದ್ಸಾವಿರ ಕಟ್ಟಿದ್ದೀವಿ ಸರ್, ಇನ್ನು ಐದು ಸಾವಿರ ಊರಿನಿಂದ ತರ್ತಿದ್ದಾನೆ ನನ್ನ ತಮ್ಮ, ನೀವು ಆಪರೇಷನ್ ಮುಗಿಸುವಷ್ಟರಲ್ಲಿ ತಂದು ಕಟ್ತೀವಿ ಅಂದ್ರೂ ಪೂರ್ತಿ ದುಡ್ಡು ಕಟ್ಟದಿದ್ದರೆ ನಾಡಿಮಿಡಿತಾನೂ ನೋಡಲ್ಲ ಅಂದ್ಬಿಟ್ಟ. ಧನ ಪಿಶಾಚಿ” ರೋಗಿಯೊಬ್ಬರ ಕಡೆಯವರು ನನ್ನ ಬಗ್ಗೆ ಆಡುತ್ತಿದ್ದ ಮಾತುಗಳಿವು. ಬಹುಶಃ ನನ್ನೆಲ್ಲಾ ರೋಗಿಗಳು ಹೀಗೇ ಮಾತನಾಡುತ್ತಾರೇನೋ? ಇವರ ಮಾತು ಮಾತ್ರ ಆಕಸ್ಮಿಕವಾಗಿ ಕೇಳಿಸಿಬಿಟ್ಟಿತು.
          ‘ಬಡ ರೋಗಿಗಳ ಬಳಿ ಕಡಿಮೆ ಹಣ ತೆಗೆದುಕೊಳ್ಳಬೇಕು. ಪ್ರತಿ ಭಾನುವಾರ ಹಳ್ಳಿಗಳಲ್ಲಿ ಉಚಿತ ಕ್ಯಾಂಪ್ ಮಾಡಬೇಕು. ಡ್ರಗ್ ಕಂಪನಿಗಳಿಂದ ಯಾವತ್ತಿಗೂ ಕಮಿಷನ್ ತೆಗೆದುಕೊಳ್ಳಬಾರದು...’ಸಾವಿರ ಕನಸುಗಳಿದ್ದವು. ಕನಸು ಹಂಚಿಕೊಳ್ಳಲು, ತುಂಬಲು ನಿನ್ನಂಥ ಗೆಳೆಯರಿದ್ದರು. ನೀನು ಹೇಳಿದ್ದು ಸತ್ಯ. ವಾಸ್ತವದ ಪ್ರವಾಹದಲೆಗಳಿಗೆ ಎದುರಾಗಿ ಆದರ್ಶದ ಹಾಯಿದೋಣಿ ಮುಳುಗದಂತೆ ತಡೆದು ಗುರಿಯತ್ತ ಹುಟ್ಟುಹಾಕುವುದು . . .ನನ್ನಿಂದಂತೂ ಸಾಧ್ಯವಾಗಲಿಲ್ಲ.
          ಸರ್ಜರಿ ಸೀಟಿಗೆ ದುಡ್ಡು ಕಟ್ಟಲು ಬ್ಯಾಂಕಿನಿಂದ ಹದಿನೈದು ಲಕ್ಷ ಸಾಲ ತೆಗೆದುಕೊಂಡಾಗಲೇ ನೀನು ಎಚ್ಚರಿಸಿದ್ದೆ. ‘ಈ ಸಾಲ ತೀರಿಸುವುದಕ್ಕಾದರೂ ನಿನ್ನೆಲ್ಲ ಕನಸುಗಳನ್ನು ತಾತ್ಕಾಲಿಕವಾಗಿಯಾದರೂ ತೊಡೆದುಹಾಕಿ ದುಡ್ಡು ವಸೂಲಿಗೆ ನಿಲ್ಲಬೇಕು. ಒಮ್ಮೆ ದುಡ್ಡಿನ ರುಚಿ ಹತ್ತಿದ ಮೇಲೆ. . .ಹೋಗ್ಲಿಬಿಡು’ ನನಗೂ ಅದು ಸತ್ಯ ಅನ್ನಿಸಿತ್ತು. ಬಹುತೇಕ ಎಲ್ಲ ಗೆಳೆಯರೂ ಪಿ ಜಿ ಸೀಟು ತೆಗೆದುಕೊಂಡಿದ್ದರು. ಬೇರೆಯವರ ಜೀವನಶೈಲಿ, ಅವರ ಏಳಿಗೆಯಿಂದ ಹಿಗ್ಗದೆ ಕುಗ್ಗದೆ ಬದುಕುವ ನಿನ್ನ ನಿರ್ಲಿಪ್ತತೆ ನನ್ನಲ್ಲಿರಲಿಲ್ಲ. ಸುತ್ತಲಿನ ಪ್ರಪಂಚವೆಲ್ಲ ಹಣದ ಬೆನ್ನತ್ತಿ ನಿಂತಿರುವಾಗ ಸೇವೆ, ಜನ, ಆದರ್ಶ ಅಂತ ಮಾತನಾಡುವುದೇ ಅವಮಾನದ, ಅಪಹಾಸ್ಯದ ಸಂಗತಿಯಾತ್ತು. ಪಿ ಜಿ ಗೆ ಸೇರಿದ ನಂತರ ಜಿಜ್ಞಾಸೆಗಳು ಹೆಚ್ಚುತ್ತಾ ಸಾಗಿದವು. ಮನದಲ್ಲಿ ಉತ್ತರ ಸಿಗದ ಸಾವಿರಾರು ಪ್ರಶ್ನೆಗಳು. ಉತ್ತರ ಕೊಡುವ ಅರ್ಹತೆಯಿದ್ದ ನೀನು ಯಾರಿಗೂ ಹೇಳದೆ ನಿನ್ನದೇ ದಾರಿಯಲ್ಲಿ ಸಾಗಿಬಿಟ್ಟೆ. ಈಗ ಎಲ್ಲಿದ್ದೀಯೋ? ಘಟ್ಟದ ಗುಡ್ಡವೊಂದರ ಮೇಲಾ ಅಥವಾ ಪ್ರಪಾತದಲ್ಲಾ?
          ‘ಆತ್ಮಹತ್ಯೆ ಮಾಡಿಕೊಳ್ಳೋದು ಮಹಾಪಾಪದ ಕೆಲಸ. It is a great sin’ ಹಿಂದೆ ನಾನೇ ಹೇಳುತ್ತಿದ್ದ ಮಾತುಗಳು ಮುಂದೊಂದು ದಿನ ನನ್ನನ್ನೇ ಇರಿಯುತ್ತವೆ ಎಂದೆಣಿಸಿರಲಿಲ್ಲ. ಇಷ್ಟೆಲ್ಲ ಬರೆದ ಮೇಲೂ “ನನ್ನ ಸಾವಿಗೆ ಯಾರೂ ಕಾರಣರಲ್ಲ” ಅಂತ ಬರೆಯೋದು ಮೂರ್ಖತನ. ‘ಇವರೇ ನನ್ನ ಸಾವಿಗೆ ಕಾರಣ’ ಎಂದು ನಿರ್ದಿಷ್ಟವಾಗಿ ಬರೆಯಲು ಎದುರಿಗೆ ಒಬ್ಬ ವ್ಯಕ್ತಿ ನಿಂತಿಲ್ಲ, ಇಡೀ ವ್ಯವಸ್ಥೆಯೇ ಇದೆ. ಮುಂಚೂಣಿಯಲ್ಲಿ ನನ್ನ ಆತ್ಮಸಾಕ್ಷಿ ನಿಂತಿದೆ, ಪಕ್ಕದಲ್ಲಿ ನನ್ನ ಆತ್ಮಸಾಕ್ಷಿಯ ಪ್ರತಿಬಿಂಬದಂತೆ ನೀನು.
          ಅಪರಾಧಿ ಭಾವವೇ ಮನದಲ್ಲಿ ಹುಟ್ಟದವರಿಗೆ ಮಾತ್ರ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುವುದು ಸಾಧ್ಯವೇನೋ? ಡೈರಿಯ ಈ ಕೊನೆಯ ಪುಟ ನಿನಗೆ ಬರೆಯುತ್ತಿದ್ದೀನೋ ಅಥವಾ ನನ್ನೊಳಗಿನ ನನಗೋ? ಎರಡಕ್ಕೂ ಅಂಥ ವ್ಯತ್ಯಾಸವಿರಲಾರದು ಬಿಡು. ಈಗಲೂ ನಾನು ಸರಿದಾರಿಯಲ್ಲಿ ಸಾಗಬಹುದು ಅನ್ನಿಸುತ್ತೆ. ನನಗೇ ಯಾಕೋ ವಿಶ್ವಾಸವಿಲ್ಲ. ಸಾಯುವ ಇಚ್ಛೆಯಿರದಿದ್ದರೂ ಬದುಕಬೇಕೆಂಬ ಆಸೆ ಸತ್ತುಹೋಗಿದೆ. . .ಬರುತ್ತೀನಿ ಕಾಮ್ರೇಡ್. . .
-      ಡಾ. ಅಶೋಕ್. ಕೆ. ಆರ್.
ಸುಳ್ಯ.

Saturday, October 15, 2011

ಅಂತ್ಯ ಕಾಣದ ತೆಲಂಗಾಣ ಚಳುವಳಿ

telangana;source - wikipedia

           ಮತ್ತೆ ತೆಲಂಗಾಣ ಸುದ್ದಿಯಲ್ಲಿದೆ. ಎಲ್ಲ ಸಂಚಾರ ಮಾರ್ಗಗಳನ್ನು ಮುಚ್ಚಿಸಲಾರಂಭಿಸಿದ್ದಾರೆ ತೆಲಂಗಾಣ ರಾಜ್ಯ ಪರ ಹೋರಾಟಗಾರರು. ಕನ್ನಡ ಪತ್ರಿಕೆಗಳಲ್ಲಿ ಈ ಹೋರಾಟದಿಂದ ಕರ್ನಾಟಕ್ಕೆ ವಿದ್ಯುತ್ ಉತ್ಪಾದಿಸಲು ಸರಬರಾಜಾಗುವ ಕಲ್ಲಿದ್ದಲ್ಲಿನ ಬಗೆಗಿನ ಚಿಂತೆಯೇ ಅಧಿಕವಾಗಿ ಪ್ರಕಟವಾಗುತ್ತಿದೆ. ದಶಕಗಳ ಹೋರಾಟದ ಇತಿಹಾಸದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲುತ್ತಿರುವವರೇ ಕಡಿಮೆ. ತೆಲಂಗಾಣ ಹೋರಾಟದ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಸಂಕ್ಷಿಪ್ತ ಕನ್ನಡಾನುವಾದ ಹಿಂಗ್ಯಾಕೆ?!ಯಲ್ಲಿ.
          ತೆಲಂಗಾಣ ರಾಜ್ಯ ಹೋರಾಟ ಕೇವಲ ರಾಜಕೀಯ ಪುಢಾರಿಗಳಿಂದ ಪ್ರೇರಿತವಾದುದಲ್ಲ. ಕೆಲವೇ ಕೆಲವು ವರ್ಷಗಳ ಹೋರಾಟವೂ ಅಲ್ಲ. ಭಾರತ ಸ್ವತಂತ್ರಗೊಳ್ಳುವುದಕ್ಕೂ ಮೊದಲು 1946ರಲ್ಲಿ ಆರಂಭವಾದ ರೈತ, ಕಾರ್ಮಿಕರ ಸಶಸ್ತ್ರ ಹೋರಾಟ ಇಂದಿನ ತೆಲಂಗಾಣ ಚಳುವಳಿಯ ಮುನ್ನುಡಿಯೆಂದು ಪರಿಗಣಿಸಬಹುದು. ತೆಲಂಗಾಣ ಪ್ರಾಂತ್ಯದಲ್ಲಿ ಒಟ್ಟು ಬರುವ ಜಿಲ್ಲೆಗಳು ಹತ್ತು – ಆದಿಲಾಬಾದ್, ಹೈದರಾಬಾದ್, ಖಮ್ಮಂ, ಕರೀಂನಗರ, ಮೆಹಬೂಬನಗರ, ಮೇದಕ್, ನಲಗೊಂಡ, ನಿಜಾಮಬಾದ್, ರಂಗಾರೆಡ್ಡಿ ಮತ್ತು ವಾರಂಗಲ್. ಒಟ್ಟು 1,14,840 ಚದುರ ಕಿ.ಮಿ ವಿಸ್ತೀರ್ಣದ 35,286,757 ಜನಸಂಖ್ಯೆ ಇರುವ ಪ್ರದೇಶ. ಸಂಯುಕ್ತಾಂಧ್ರದ 42 ಪ್ರತಿಶತಃ ಜನಸಂಖ್ಯೆಯಿದು. ಒಟ್ಟು ಆದಾಯ ಮೂಲದಲ್ಲಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದಿಂದ 18 ಪ್ರತಿಶತಃ ಬಂದರೆ, ತೆಲಂಗಾಣ ಪ್ರದೇಶದ ಆದಾಯ (ಹೈದರಾಬಾದ್ ಜಿಲ್ಲೆಯನ್ನೂ ಸೇರಿಸಿ) 62%!. ಆದರೆ ಅಭಿವೃದ್ಧಿಯಲ್ಲಿ ಗಾವುದ ದೂರ.
          1953ರಲ್ಲಿ ಭಾಷಾವಾರು ಆಧಾರದಲ್ಲಿ ರಾಜ್ಯಗಳನ್ನು ರಚಿಸಲು ಸಮಿತಿಯನ್ನು ರಚಿಸಲಾಯಿತು. ಭಾಷೆಯಲ್ಲಿ ಸಾಮ್ಯತೆಯಿದ್ದರೂ ಪ್ರಾದೇಶಿಕ ಸಂಸ್ಕೃತಿ ಆಚಾರ ವಿಚಾರಗಳಲ್ಲಿ ಹೆಚ್ಚೆನಿಸುವಷ್ಟೆ ವ್ಯತ್ಯಾಸಗಳಿರುವ ತೆಲಂಗಾಣ ಮತ್ತು ಆಂಧ್ರದ ಏಕೀಕರಣಕ್ಕೆ ಈ ಸಮಿತಿಗೂ ಹೆಚ್ಚಿನ ಒಲವಿರಲಿಲ್ಲ. ತಮ್ಮ ಪ್ರದೇಶ ಹಿಂದುಳಿದಿದ್ದಾಗ್ಯೂ ಹೆಚ್ಚಿನ ಆದಾಯವಿತ್ತು. ಆ ಆದಾಯ ಆಂಧ್ರದ ಅಭಿವೃದ್ಧಿಗೆ ಹೋಗಿಬಿಡಬಹುದೆಂಬುದು ತೆಲಂಗಾಣದವರ ಅಂಜಿಕೆ. ಅದು ನಿಜವಾಗಿದ್ದು ವಿಪರ್ಯಾಸ. ಕೃಷ್ಣ ಮತ್ತು ಗೋದಾವರಿ ನದಿಗಳ ಹೆಚ್ಚು ಹರಿಯುವಿಕೆ ತೆಲಂಗಾಣದಲ್ಲಿ; ಆದರೆ ಅವುಗಳಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಯೋಜನ ಆಂಧ್ರಕ್ಕೆ. ಬ್ರೀಟೀಷರ ಆಳ್ವಿಕೆಯಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದ ಆಂಧ್ರದವರು ತಮ ದಕ್ಕಬೇಕಾದ ನೌಕರಿಯನ್ನು ಕಸಿದುಕೊಳ್ಳುತ್ತಾರೆ ಎಂಬ ಭಯ. ಇವೆಲ್ಲವುಗಳನ್ನೂ ಗಮನಿಸಿದ ಸಮಿತಿ 1961 ರವರೆಗೆ ಏಕೀಕರಣ ಜಾರಿಯಲ್ಲಿರಲಿ ನಂತರ ತೆಲಂಗಾಣದ ಹೆಚ್ಚಿನ ಜನರು ಬೇರೆ ರಾಜ್ಯಕ್ಕೆ ಒತ್ತಾಯಿಸಿದರೆ ರಾಜ್ಯ ಪುನರ್ರಚನೆ ಮಾಡಬೇಕೆಂದು ಕೊಟ್ಟ ಸಲಹೆ ಐವತ್ತು ವರುಷಗಳಾದರೂ ಇನ್ನೂ ಆಚರಣೆಗೆ ಬಂದಿಲ್ಲ.
          ಅಂದು ಮತ್ತು ಇಂದು ತೆಲಂಗಾಣ ಚಳುವಳಿಯ ಆತ್ಮ ವಿದ್ಯಾರ್ಥಿಗಳದು. 1968ರಲ್ಲಿ ಒಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸರಕಾರಿ ನೇಮಕಾತಿಯಲ್ಲಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದರು. ಅಧಿಕೃತ ಸರಕಾರಿ ವರದಿಗಳ ಪ್ರಕಾರ 23 ಮಂದಿ ಪೋಲೀಸ್ ಶೂಟೌಟ್ ನಲ್ಲಿ ಮೃತರಾದರು. 2009ರಲ್ಲಿ ಮತ್ತೆ ಪುಟಿದೆದ್ದ ಚಳುವಳಿಯಲ್ಲಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಪ್ರತಿಭಟನೆಯನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದರು. ಪ್ರತಿಭಟನೆಯ ಕಾವಿಗೆ ಬೆದರಿದ ಕೇಂದ್ರ ಸರಕಾರ ಶ್ರೀ ಕೃಷ್ಣ ಸಮಿತಿಯನ್ನು ರಚಿಸಿ ಡಿಸೆಂಬರ್ 31, 2010ರ ಒಳಗೆ ವರದಿ ಸಲ್ಲಿಸಬೇಕೆಂದು ಆದೇಶಿಸಿತು. ಪ್ರಸ್ತುರ ಸ್ಥಿತಿಯಲ್ಲಿ ಸಂಯುಕ್ತಾಂಧ್ರದ ಪರಿಕಲ್ಪನೆ ಸರಿಯಲ್ಲವೆಂದು ತನ್ನ ವರದಿಯಲ್ಲಿ ತಿಳಿಸಿದ ಸಮಿತಿ ತೆಲಂಗಾಣಕ್ಕೆ ಕಡೇ ಪಕ್ಷ ಪ್ರತ್ಯೇಕ ಕೌನ್ಸಿಲ್ ಒಂದನ್ನಾದರೂ ರಚಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿತು. ತೆಲಂಗಾಣ ರಾಜಕೀಯ ಪಕ್ಷಗಳ ಹತೋಟಿ, ಅಲ್ಲಿನ ಜನರ ಅಭಿಪ್ರಾಯಗಳನ್ನು ಆಂಧ್ರದವರ ಒಡೆತನದಲ್ಲೇ ಹೆಚ್ಚಿರುವ ಮಾಧ್ಯಮಗಳ ಮುಖಾಂತರ ಬದಲಿಸುವ ಬಗ್ಗೆ ಸಲಹೆಗಳನ್ನೂ ಕೊಟ್ಟಿದ್ದ ಶ್ರೀಕೃಷ್ಣ ವರದಿ ಆಂಧ್ರ ಹೈಕೋರ್ಟಿನಿಂದ ಛೀಮಾರಿಗೂ ಒಳಪಟ್ಟಿತು. ‘ಇಂಥ ಸಲಹೆಗಳು ಪ್ರಜಾಪೃಭುತ್ವದ ಅಡಿಪಾಯಕ್ಕೇ ಅಪಾಯವುಂಟುಮಾಡುತ್ತದೆ’ ಎಂದು ನ್ಯಾಯಮೂರ್ತಿ ನರಸಿಂಹ ರೆಡ್ಡಿ ಅಭಿಪ್ರಾಯಪಟ್ಟರು.
          ಈಗ ಮತ್ತೆ ತೆಲಂಗಾಣ ಹೋರಾಟ ತಾರಕಕ್ಕೇರಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಂದಿನ ನಿರಾಸಕ್ತ ದೋರಣೆ, ರಾಜಕಾರಣಿಗಳ ಚತುರ ನಡೆಗಳಿಂದ ಅಲ್ಲಿನ ಜನ ಬೇಸತ್ತಿದ್ದಾರೆ. ಬಂಧನ, ಹಲ್ಲೆಗೊಳಗಾಗುತ್ತಿದ್ದರೂ ಹಿಂದೆಗೆಯುತ್ತಿಲ್ಲ. ರಾಜ್ಯ ಪಡೆದೇ ತೀರುತ್ತೇವೆಂಬ ಅಚಲ ವಿಶ್ವಾಸದಿಂದ ಅಂತಿಮವೆಂದೇ ಕರೆಯಬಹುದಾದ ಹೋರಾಟಕ್ಕೆ ಅಣಿಯಾಗಿದ್ದಾರೆ. ದಶಕಗಳ ಶೋಷಣೆಗೆ ಈಗಲಾದರೂ ಅಂತ್ಯ ಸಿಗುತ್ತದಾ? ಕಾದು ನೋಡಬೇಕಷ್ಟೇ.
-      ಡಾ. ಅಶೋಕ್. ಕೆ. ಆರ್
Related Posts Plugin for WordPress, Blogger...